ಶಿವಮೊಗ್ಗ: ರಾಜ್ಯದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದಂತ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿ ಶಿವಮೊಗ್ಗದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೇಬಲ್ ಮಂಜು.ಆರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರವನ್ನು ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದಂತ ಶಿವಮೊಗ್ಗ ಕರವೇ ಜಿಲ್ಲಾಧ್ಯಕ್ಷ ಕೇಬಲ್ ಮಂಜು.ಆರ್ ಅವರು ನಿನ್ನೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಪಂಚತಾರಾ ಹೋಟೇಲ್ ನಲ್ಲಿ ಸಂಸದೀಯ ರಾಜಭಾಷಾ ಸಮಿತಿ ನಡೆಸುತ್ತಿದ್ದ ಹಿಂದಿ ಹೇರಿಕೆ ಕುತಂತ್ರಗಳ ಸಮಾಲೋಚನಾ ಕಾರ್ಯಗಾರಕ್ಕೆ ಕರವೇ ಮುಖಂಡರು, ಕಾರ್ಯಕರ್ತರು ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಹಿಂದಿ ಸಾಮ್ರಾಜ್ಯ ಶಾಹಿಗಳಿಗೆ ಬಹುದೊಡ್ಡ ಎಚ್ಚರಿಕೆ ನೀಡಲಾಗಿದೆ ಎಂದರು.
ಸ್ವಾತಂತ್ರ್ಯ ನಂತ್ರ ಇದೇ ರಾಜ ಭಾಷಾ ಆಯೋಗ, ಸಮಿತಿ ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹೇರುವ ವ್ಯವಸ್ಥಿತ ಕುತಂತ್ರವನ್ನು ನಡೆಸುತ್ತಾ ಬಂದಿದೆ. ಮೊಟ್ಟ ಮೊದಲ ಬಾರಿಗೆ ಈ ರಾಜ ಭಾಷಾ ಸಮಿತಿಗೆ ನೇರವಾಗಿ ಬಿಸಿ ಮುಟ್ಟಿಸುವ ಕಾರ್ಯವನ್ನು ನಿನ್ನೆ ಕರವೇ ಮಾಡಿದೆ ಎಂದು ತಿಳಿಸಿದರು.
ಇನ್ಮುಂದೆ ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಹಿಂದಿ ಪ್ರಚಾರಕ್ಕೆ ಯಾವುದೇ ಸಂಸ್ಥೆ ಕಾರ್ಯಕ್ರಮ ಮಾಡಲು ಮುಂದಾದರೇ, ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನಮ್ಮ ಸಹನೆಗೆ ಮಿತಿ ಇದೆ. ಇನ್ನೂ ನಾವು ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ನಿನ್ನೆ ರಾಜಭಾಷಾ ಸಮಿತಿ ನಡೆಸುತ್ತಿದ್ದಂತ ಹಿಂದಿ ಸಮಾಲೋಚನಾ ಸಭೆಯನ್ನು ವಿರೋಧಿಸಿ ಕರವೇ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮ್ಮೆ ಹೂಡಲಾಗಿದೆ. ಇಂತಹ ಕೇಸ್ ಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂಪಡೆಯುವಂತೆ ಆಗ್ರಹಿಸಿ ಶಿವಮೊಗ್ಗದ ಡಿಸಿ ಕಚೇರಿ ಎದುರು ಕರವೇ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದಂತ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯುವಂತೆ ಮನವಿಯನ್ನು ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಮಹಿಳಾ ಅಧ್ಯಕ್ಷರಾದ ಜ್ಯೋತಿ ಸೋಮಶೇಖರ್, ಸಾಗರ ತಾಲ್ಲೂಕು ಕರವೇ ಅಧ್ಯಕ್ಷರಾದ ಮನೋಜ್ ಕುಗ್ವೆ, ಉಪಾಧ್ಯಕ್ಷರಾದ ಗಣಪತಿ ಪಡವಗೊಡು ಅಮಚಿ, ಸಾಗರ ನಗರ ಅಧ್ಯಕ್ಷರಾದ ಷಣ್ಮುಖ ಕೆಂಚನಾಳಸರ, ಯುವ ಅಧ್ಯಕ್ಷರಾದ ಶರತ್ ನೇರಲಗಿ, ವಿಧ್ಯಾರ್ಥಿ ಘಟಕದ ಅಧ್ಯಕ್ಷರಾದ ನಿತೀನ್ ಜನ್ನೆಹಕ್ಲು ಮತ್ತು ಶಾಮಲಾ ಆನಂದಪುರ ಸೇರಿದಂತೆ ಇತರೆ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಇಂದು ವಿಶ್ವ ಹೃದಯದ ದಿನ: ‘ಹೃದಯಾಘಾತ’ದಿಂದ ಪಾರಾಗುವ ಬಗೆ ಇಲ್ಲಿದೆ ಮಾಹಿತಿ | World Heart Day 2025
ಇಂದು ‘ವಿಶ್ವ ಹೃದಯ ದಿನ’: ರಾಜ್ಯದಲ್ಲಿ ಪುನೀತ್ರ ರಾಜ್ ಕುಮಾರ್ ‘ಹೃದಯ ಜ್ಯೋತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್







