ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನಬೆಳಗಾದರೆ ಸಾಕು, ಕೇಳಿಬರುತ್ತಿರುವ ಕಹಿ ಸುದ್ದಿಗಳೆಂದರೆ ಅನಿರೀಕ್ಷಿತ ಮತ್ತು ಅಕಾಲಿಕ ಹೃದಯಾಘಾತದ ಸಾವುಗಳು. ನಿನ್ನೆ ದಿಲೀಪ್ ರಾಜ್, ಇಂದು ನಂದೀಶ್… ನಾಳೆ ನೀವೋ ಅಥವಾ ನಾನೋ? ಈ ಸಾವುಗಳ ಸರಣಿ ಹೀಗೆಯೇ ಮುಂದುವರಿಯುತ್ತಿದ್ದರೆ, ಅನಿರೀಕ್ಷಿತ ಹೃದಯಾಘಾತಕ್ಕೆ ಇನ್ನೆಷ್ಟು ಯುವ ಜೀವಗಳು ಬಲಿಯಾಗಬೇಕು ಎಂಬ ಯಕ್ಷಪ್ರಶ್ನೆ ಇಡೀ ಸಮಾಜವನ್ನು ಕಾಡುತ್ತಿದೆ.
ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಅವರು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿರುವ ಈ ಗಂಭೀರ ವಿಷಯದ ಬಗ್ಗೆ ಫೇಸ್ಬುಕ್ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸರ್ಕಾರಗಳು ಮತ್ತು ಆರೋಗ್ಯ ವ್ಯವಸ್ಥೆಯ ನಿದ್ರಾಸ್ಥಿತಿಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ಜಾರಿಕೊಳ್ಳುತ್ತಿರುವ ಸರ್ಕಾರಗಳು – ಪ್ರಶ್ನಿಸುತ್ತಿರುವ ಜನಸಾಮಾನ್ಯರು
ಔಷಧಿ ತಯಾರಿಕಾ ಕಂಪನಿಗಳೇ ತಮ್ಮ ವ್ಯಾಕ್ಸಿನ್ಗಳಲ್ಲಿ ದೋಷವಿತ್ತು (ಅಡ್ಡಪರಿಣಾಮಗಳ ಸಾಧ್ಯತೆ) ಎಂದು ಒಪ್ಪಿಕೊಂಡಿದ್ದರೂ, ಅಂದು ಲಸಿಕೆಯನ್ನು ಕಡ್ಡಾಯಗೊಳಿಸಿ ಜನರಿಗೆ ನೀಡಿದ ಸರ್ಕಾರಗಳು ಇಂದು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ರಣಹೇಡಿಗಳಂತೆ ನುಣುಚಿಕೊಳ್ಳುತ್ತಿವೆ. ಸಾರ್ವಜನಿಕ ವಲಯದಲ್ಲಿ, ಕುಂತಲ್ಲಿ ನಿಂತಲ್ಲಿ ಜನರೆಲ್ಲರೂ ಈ ಅಕಾಲಿಕ ಸಾವುಗಳಿಗೆ ಕೋವಿಡ್ ವ್ಯಾಕ್ಸಿನ್ ಕಾರಣವಿರಬಹುದೇ ಎಂದು ಚರ್ಚಿಸುತ್ತಲೇ ಇದ್ದಾರೆ.
“ಹೋಗಲಿ, ಅವತ್ತಿನ ಸಂಕಷ್ಟದ ತುರ್ತಿಗೆ ಅನಿವಾರ್ಯವಾಗಿ ಲಸಿಕೆ ಕೊಟ್ಟಾಯಿತು, ಸರಿ.. ಒಪ್ಪಿಕೊಳ್ಳೋಣ.. ಆದರೆ ಈಗ ಅನಾಹುತಗಳಾಗುತ್ತಿವೆಯಲ್ಲಾ? ಇದಕ್ಕೆ ಏನು ಕ್ರಮ, ಏನು ಪರಿಹಾರ ಎಂಬ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಂಡಿಲ್ಲ.” ಎಂದು ಕವಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಬೂಬು ಬೇಡ, ನಿಜವಾದ ಕಾರಣವೇನು?
ಜನಸಾಮಾನ್ಯರು ವೈದ್ಯಕೀಯ ತಜ್ಞರಲ್ಲ, ಅವರ ಅಭಿಪ್ರಾಯ ತಪ್ಪು ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಕರೊನಾ ನಂತರದ ದಿನಗಳಲ್ಲಿ ಇದ್ದಕ್ಕಿದ್ದಂತೆ ಈ ಯುವಜೀವಗಳ ಮಾರಣಹೋಮ ಯಾಕೆ ಜರುಗುತ್ತಿದೆ? ಇದಕ್ಕೆ ಅಸಲಿ ಕಾರಣವೇನು? ಕೋವಿಡ್ ನಂತರ ಮನುಷ್ಯನ ದೇಹದಲ್ಲಿ, ಆರೋಗ್ಯದಲ್ಲಿ ಏನೇನು ಬದಲಾವಣೆಗಳಾಗಿವೆ? ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಆರೋಗ್ಯ ಇಲಾಖೆಯಾಗಲಿ, ಸರ್ಕಾರಗಳಾಗಲಿ ಇಂದು ಮೌನಕ್ಕೆ ಶರಣಾಗಿವೆ ಎಂದು ಗುಡುಗಿದ್ದಾರೆ.
ಯುವಕರ ಹೃದಯಾಘಾತಕ್ಕೆ ಕೇವಲ ‘ಒತ್ತಡ’ (Stress) ಅಥವಾ ‘ಆಹಾರ ಕ್ರಮ’ (Diet) ಎಂದು ಹಳೇ ಸಬೂಬುಗಳನ್ನು ನೀಡಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿರಾಜ್ ಅವರು ನಂದೀಶ್ ಅವರ ಸಾವನ್ನು ಉಲ್ಲೇಖಿಸಿದ್ದಾರೆ. ನಂದೀಶ್ ಅವರು ಯಾವುದೇ ನಗರದ ಒತ್ತಡದ ಬದುಕಿನಲ್ಲಿ ಇರಲಿಲ್ಲ. ಸುಮಾರು ವರ್ಷಗಳಿಂದ ಬೆಂಗಳೂರು ಬಿಟ್ಟು, ತೀರ್ಥಹಳ್ಳಿಯ ತಮ್ಮದೇ ಜಮೀನಿನಲ್ಲಿ ರೈತರಾಗಿ ನೆಮ್ಮದಿಯ ಬದುಕು ಕಂಡುಕೊಂಡಿದ್ದರು. ಆದರೂ ಅವರಿಗೆ ಹೃದಯಾಘಾತವಾಗಿದ್ದಕ್ಕೆ ಉತ್ತರಿಸುವವರು ಯಾರು? ಎಂಬುದಾಗಿ ಪ್ರಶ್ನಿಸಿದ್ದಾರೆ.
ತಜ್ಞರ ಮೌನ ಮತ್ತು ಜೊಂಬಿ ಪಡೆಗಳ ಆಕ್ರಮಣ
ಇಂದು ದೇಶದಲ್ಲಿ ‘ತಜ್ಞರು’ ಎನಿಸಿಕೊಂಡವರಿಗೂ ಈ ಬಗ್ಗೆ ಗಟ್ಟಿಯಾಗಿ ಮಾತನಾಡುವ ಧೈರ್ಯವಿಲ್ಲದಂತಾಗಿದೆ. ವ್ಯಾಕ್ಸಿನ್ ಕಾರಣ ಇರಬಹುದೇ ಎಂದು ಯಾರಾದರೂ ಧ್ವನಿ ಎತ್ತಿದರೆ, ಹಾವು ತುಳಿದವರಂತೆ ಬೆಚ್ಚಿಬೀಳುವ ತಜ್ಞರು, ಯಾರದ್ದೋ ಇಮೇಜ್ ಕಾಪಾಡಲು ಇನ್ನೇನೇನೋ ಬಡಬಡಾಯಿಸುತ್ತಿದ್ದಾರೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಂತೂ ಸತ್ಯವನ್ನು ಮುಚ್ಚಿಹಾಕಲು, ಪ್ರಶ್ನೆ ಕೇಳುವವರ ಮೇಲೆ ಅಸಭ್ಯ ಮಾತುಗಳ ಮೂಲಕ ಆಕ್ರಮಣ ಮಾಡುವ ಒಂದು ‘ಜೊಂಬಿ ಪಡೆ’ಯೇ ಸೃಷ್ಟಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಅಂತಿಮ ಸತ್ಯ
ಆದರೆ, ನಿಲ್ಲುವ ಹೃದಯಕ್ಕೆ ಯಾವುದೇ ಜಾತಿ, ಧರ್ಮ, ಸಿದ್ಧಾಂತ ಅಥವಾ ರಾಜಕೀಯ ಪಕ್ಷಗಳ ಭೇದವಿರುವುದಿಲ್ಲ. ವ್ಯವಸ್ಥೆಯ ತಪ್ಪುಗಳಿಂದ ಅಥವಾ ನಿರ್ಲಕ್ಷ್ಯದಿಂದ ಯುವ ಜನತೆ ಸತ್ತು ಹೆಣವಾಗುತ್ತಿದ್ದರೂ ನಾವಿನ್ನೂ ಮೂಕಪ್ರೇಕ್ಷಕರಾಗಿದ್ದೇವೆ.
ಕವಿರಾಜ್ ಅವರು ತಮ್ಮ ಲೇಖನವನ್ನು ಅತ್ಯಂತ ಮಾರ್ಮಿಕ ಹಾಗೂ ವ್ಯಂಗ್ಯಭರಿತ ಸಾಲುಗಳೊಂದಿಗೆ ಮುಕ್ತಾಯಗೊಳಿಸಿದ್ದಾರೆ: “ನಾವು ಉಳಿಯದಿದ್ದರೂ, ನಮ್ಮ ಹೆಣದ ರಾಶಿಗಳ ಮೇಲೆ ನಾವು ನಂಬಿದ ಸಿದ್ಧಾಂತ, ಪಕ್ಷ, ನಾಯಕರು ಮತ್ತು ಅವರ ಅಧಿಕಾರ ಚಿರಾಯುವಾಗಲಿ!” ಎಂಬುದಾಗಿ ಖೇದ ವ್ಯಕ್ತ ಪಡಿಸಿದ್ದಾರೆ.
ಇನ್ನಾದರೂ ಸರ್ಕಾರಗಳು ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು, ಕೋವಿಡ್ ನಂತರದ ಈ ಅಕಾಲಿಕ ಸಾವುಗಳ ಕುರಿತು ವೈಜ್ಞಾನಿಕ ತನಿಖೆ ನಡೆಸಿ, ಜನರಿಗೆ ಸೂಕ್ತ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ನೀಡಬೇಕಾಗಿದೆ. ಇಲ್ಲದಿದ್ದರೆ ಈ ‘ಸತ್ತ ಸರಕಾರಗಳು ಮತ್ತು ಸತ್ತ ಪ್ರಜೆಗಳ’ ಮೌನಕ್ಕೆ ಇನ್ನಷ್ಟು ಯುವ ಜೀವಗಳು ಬಲಿಯಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.









