ಜಿತು ಮುಂಡಾ ಎಂಬುವವರು ತಮ್ಮ ಮೃತ ತಂಗಿಯ ಅಸ್ಥಿಪಂಜರದ ಅವಶೇಷಗಳನ್ನು ಹೊತ್ತು, ಆಕೆ ಮೃತಪಟ್ಟಿರುವುದಕ್ಕೆ ಸಾಕ್ಷಿಯಾಗಿ 4 ಕಿ.ಮೀ ದೂರದಲ್ಲಿರುವ ಒಡಿಶಾ ಗ್ರಾಮ್ಯ ಬ್ಯಾಂಕ್‌ಗೆ ತೆರಳಿದ ಹೃದಯವಿದ್ರಾವಕ ಘಟನೆ ನಡೆದ ಮರುದಿನವೇ ಕೆಂದುಝರ್ ಜಿಲ್ಲಾಡಳಿತ ಮತ್ತು ಬ್ಯಾಂಕ್ ಎಚ್ಚೆತ್ತುಕೊಂಡಿವೆ. ಮಂಗಳವಾರದಂದು ಅವರ ಕುಟುಂಬಕ್ಕೆ ಬ್ಯಾಂಕ್ ಖಾತೆಯಲ್ಲಿದ್ದ 19,300 ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
ಕೆಂದುಝರ್ ಕೇಂದ್ರ ಕಚೇರಿಯಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ದಿಯಾನಾಲಿ ಗ್ರಾಮದ ಅವರ ಮನೆಗೆ ತೆರಳಿ ಜಿತು, ಅವರ ಸಹೋದರ ಧನೇಶ್ವರ್ ಮತ್ತು ಅತ್ತಿಗೆಗೆ ಈ ಮೊತ್ತವನ್ನು ಹಸ್ತಾಂತರಿಸಲಾಯಿತು. ಇದರ ಜೊತೆಗೆ ರೆಡ್ ಕ್ರಾಸ್ ನಿಧಿಯಿಂದ 30,000 ರೂಪಾಯಿಗಳ ಹೆಚ್ಚುವರಿ ಆರ್ಥಿಕ ನೆರವನ್ನು ನೀಡಲಾಗಿದೆ.
”ಮೃತರ ಡೆತ್ ಸರ್ಟಿಫಿಕೇಟ್ (ಮರಣ ಪ್ರಮಾಣಪತ್ರ) ಮತ್ತು ವಾರಸುದಾರರ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಆಡಳಿತವು ಮುಂಡಾ ಅವರಿಗೆ ಸಹಾಯ ಮಾಡಿದೆ. ‘ಫಾಸ್ಟ್ ಟ್ರ್ಯಾಕ್’ ಮೋಡ್‌ನಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ವೈದ್ಯಾಧಿಕಾರಿಗಳು ಮರಣ ಪ್ರಮಾಣಪತ್ರವನ್ನು ಸಹ ನೀಡಿದ್ದಾರೆ,” ಎಂದು ಕೆಂದುಝರ್ ಆಡಳಿತವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
2016ರಲ್ಲಿ ಕಾಲಾಹಂಡಿಯ ದಾನಾ ಮಾಝಿ ಅವರು ಆಂಬ್ಯುಲೆನ್ಸ್ ಇಲ್ಲದೆ ತಮ್ಮ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದ ಘಟನೆಯನ್ನು ಈ ಘಟನೆ ನೆನಪಿಸುವಂತಿದೆ. ಇದು ಕೇವಲ ವ್ಯವಸ್ಥೆಯ ವೈಫಲ್ಯವಷ್ಟೇ ಅಲ್ಲದೆ, ಸಮಾಜದ ಅಂಚಿನಲ್ಲಿರುವ ಜನರಿಗೆ ಸಾಂಸ್ಥಿಕ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಅರಿವಿನ ಕೊರತೆ ಇರುವುದನ್ನು ಎತ್ತಿ ತೋರಿಸುತ್ತದೆ. ಈ ಇಡೀ ಕಥೆಯ ಕೇಂದ್ರಬಿಂದು “ಸಾವಿನ ಪುರಾವೆ” ಆಗಿತ್ತು.
ದಿನಗೂಲಿ ನೌಕರನಾದ ಜಿತು ಅವರಿಗೆ 19,300 ರೂಪಾಯಿ ಕೇವಲ ಹಣವಾಗಿರಲಿಲ್ಲ. ಅವರ ತಂಗಿ ಕಲಾರಾ ಮುಂಡಾ ಅವರು ತಮ್ಮ ಎತ್ತುಗಳನ್ನು ಮಾರಿ ಈ ಹಣವನ್ನು ಮಲ್ಲಿಪೋಶಿ ಗ್ರಾಮದ ಒಡಿಶಾ ಗ್ರಾಮ್ಯ ಬ್ಯಾಂಕ್ ಶಾಖೆಯಲ್ಲಿ ಜಮೆ ಮಾಡಿದ್ದರು. ಅವಿವಾಹಿತೆಯಾಗಿದ್ದ ಕಲಾರಾ ಅವರಿಗೆ ನೇರ ವಾರಸುದಾರರಿರಲಿಲ್ಲ.
ಸೋಮವಾರದಂದು ಜಿತು ಅವರು ಪಾಸ್‌ಬುಕ್ ಹಿಡಿದು ಹಣ ಪಡೆಯಲು ಬ್ಯಾಂಕ್‌ಗೆ ಹೋದಾಗ ನಡೆದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ನಂತರ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರು ತನಿಖೆ ನಡೆಸಿದಾಗ, ಜಿತು ಅವರು ಸೋಮವಾರವೇ ಮೊದಲ ಬಾರಿಗೆ ಬ್ಯಾಂಕ್‌ಗೆ ಬಂದಿದ್ದರು ಎಂಬುದು ತಿಳಿದುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವರು ಕುಡಿದ ಸ್ಥಿತಿಯಲ್ಲಿದ್ದರು. ಅವರು ಹಣವನ್ನು ಹಿಂಪಡೆಯಲು ಕೇಳಿದಾಗ, ಬ್ಯಾಂಕ್ ಸಿಬ್ಬಂದಿ ಖಾತೆದಾರರನ್ನು ಕರೆತರಲು ಅಥವಾ ‘ಮೃತ್ಯು ಪ್ರಮಾಣ’ (ಸಾವಿನ ಪುರಾವೆ) ತರಲು ತಿಳಿಸಿದ್ದರು.
ಕಾನೂನು ಪ್ರಕ್ರಿಯೆಗಳ ಅರಿವಿಲ್ಲದ 50 ವರ್ಷದ ಜಿತು ಅವರಿಗೆ ಈ ಬ್ಯಾಂಕಿಂಗ್ ಭಾಷೆ ಅರ್ಥವಾಗಲಿಲ್ಲ. ಇದರಿಂದ ರೋಸಿಹೋದ ಅವರು, ಸ್ಮಶಾನಕ್ಕೆ ಹೋಗಿ ಕಲಾರಾ ಅವರ ಶವದ ಅವಶೇಷಗಳನ್ನು ಅಗೆದು ತೆಗೆದು ಬ್ಯಾಂಕ್‌ಗೆ ಹೊತ್ತು ತಂದರು. ಅವರಿಗೆ ಯಾವುದೇ ಪ್ರಮಾಣಪತ್ರ ಬೇಕಿರಲಿಲ್ಲ, ತಂಗಿ ಬದುಕಿಲ್ಲ ಎಂಬುದಕ್ಕೆ ನೇರ ಸಾಕ್ಷ್ಯವನ್ನೇ ತಂದಿದ್ದರು.
ಒಡಿಶಾ ಗ್ರಾಮ್ಯ ಬ್ಯಾಂಕ್‌ನ ಪ್ರಾಯೋಜಕತ್ವ ಹೊಂದಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬ್ಯಾಂಕಿಂಗ್ ಪ್ರಕ್ರಿಯೆಯ ಬಗ್ಗೆ ಅರಿವಿನ ಕೊರತೆ ಮತ್ತು ಶಾಖಾ ವ್ಯವಸ್ಥಾಪಕರು ವಿವರಿಸಿದ ನಿಯಮಗಳನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲದ ಕಾರಣ ಈ ಘಟನೆ ನಡೆದಿದೆ. ಬಡ ಆದಿವಾಸಿ ಮಹಿಳೆಯ ಖಾತೆಯಲ್ಲಿದ್ದ ಹಣವನ್ನು ಸುರಕ್ಷಿತವಾಗಿರಿಸುವುದು ಬ್ಯಾಂಕ್‌ನ ಉದ್ದೇಶವಾಗಿತ್ತೇ ಹೊರತು ಕಿರುಕುಳ ನೀಡುವ ಉದ್ದೇಶವಿರಲಿಲ್ಲ,” ಎಂದು ತಿಳಿಸಿದೆ.
ಆದರೆ, ಪೊಲೀಸರು ಜಿತು ಅವರನ್ನು ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದರೂ, ಮೃತದೇಹದ ಅವಶೇಷಗಳನ್ನು ಸಾಗಿಸಲು ಯಾವುದೇ ಸಹಾಯ ಮಾಡದಿರುವುದು ಆಶ್ಚರ್ಯಕರವಾಗಿದೆ. ಜಿಲ್ಲಾಡಳಿತವು “ಬ್ಯಾಂಕಿಂಗ್ ಅರಿವಿನ ಕೊರತೆ”ಯಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
”ಈ ಘಟನೆಯಲ್ಲಿ ಆಡಳಿತಾತ್ಮಕವಾಗಿ ಯಾವುದೇ ನಿರ್ಲಕ್ಷ್ಯ ನಡೆದಿದೆಯೇ ಎಂದು ತಿಳಿಯಲು ವಿವರವಾದ ತನಿಖೆ ನಡೆಸಲಾಗುತ್ತಿದೆ. ದೂರದ ಪ್ರದೇಶದ ಜನರಿಗೆ ಸರ್ಕಾರಿ ಮತ್ತು ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ನಡುವೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.








