ಬೆಂಗಳೂರು: ರಾಜ್ಯ ಚುನಾವಣಾ ಆಯೋಗದಿಂದ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ 641 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ದಿನಾಂಕ ಘೋಷಿಸಲಾಗಿದೆ. ನವೆಂಬರ್.23ಕ್ಕೆ ಮತದಾನ ನಿಗದಿ ಪಡಿಸಿದ್ದರೇ, ನವೆಂಬರ್.25ರಂದು ಮತಏಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಈ ಕುರಿತಂತೆ ಇಂದು ರಾಜ್ಯ ಚುನಾವಣಾ ಆಯೋಗದಿಂದ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದಿದೆ.
ದಿನಾಂಕ 06-11-2024ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ದಿನಾಂಕ 12-11-2024 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ದಿನಾಂಕ 13-11-2024ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ದಿನಾಂಕ 15-11-2024ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 23-11-2024ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಮರು ಮತದಾನ ಅವಶ್ಯಕತೆ ಇದ್ದರೇ ದಿನಾಂಕ 25-11-2024ರಂದು ನಡೆಸಲು ನಿಗದಿ ಪಡಿಸಲಾಗಿದೆ. ದಿನಾಂಕ 26-11-2024ರಂದು ಬೆಳಿಗ್ಗೆ 8ರಿಂದ ಮತಏಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಲಾಗುತ್ತದೆ. ದಿನಾಂಕ 26-11-2024ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ.
ದಿನಾಂಕ: 09.11.2024 ರಂದು ಎರಡನೇ ಶನಿವಾರ ನೆಗೋಷಿಯೇಬಲ್ ಇನ್‌ಸ್ಟುಮೆಂಟ್ ಕಾಯ್ದೆಯಡಿಯಲ್ಲಿ ಘೋಷಿಸಲ್ಪಟ್ಟ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಸದರಿ ದಿನದಂದು ಯಾವುದೇ ನಾಮಪತ್ರವನ್ನು ಸ್ವೀಕರಿಸದಂತೆ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡುವುದು.
ಬೀದರ್ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಇ.ಸಿ.ಐ.ಎಲ್. ಹೈದರಾಬಾದ್ ರವರು ತಯಾರಿಸಿರುವ ಮಲ್ಟಿಚಾಯ್ ವಿದ್ಯುನ್ಮಾನ ಮತ ಯಂತ್ರದ (E.V.M.) ಮೂಲಕ ಚುನಾವಣೆ ನಡೆಸಲು ಆದೇಶಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ: 06.11.2024 ರಿಂದ ದಿನಾಂಕ: 26.11.2024 ರವರೆಗೆ ಜಾರಿಯಲ್ಲಿರುತ್ತದೆ.
ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ/ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.
ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇಲೆ ತಿಳಿಸಿರುವ ಅವಧಿಯವರೆಗೆ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ವಿಚಾರ: ಅಂತಿಮ ಸುತ್ತಿನಲ್ಲಿ 5 ಸ್ಥಳ, ವಾರದಲ್ಲಿ ಫೈನಲ್- ಎಂ ಬಿ ಪಾಟೀಲ