ಬೆಂಗಳೂರು: ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಶುಭ ಮುಹೂರ್ತದ ಅನ್ವಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜೂನ್ 3ರ ಬುಧವಾರ ಸಂಜೆ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ಯಾವುದೇ ರೀತಿಯ ಬಿಲ್ಡಪ್ ಅಥವಾ ಆಡಂಬರವಿಲ್ಲದೆ, ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಅತ್ಯಂತ ಸರಳವಾಗಿ ಈ ಕಾರ್ಯಕ್ರಮ ಜರುಗಲಿದೆ. ಇಂಧನ ಬಿಕ್ಕಟ್ಟು ಹಾಗೂ ಸಂಚಾರ ದಟ್ಟಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅದ್ಧೂರಿತನಕ್ಕೆ ಬ್ರೇಕ್ ಹಾಕಲಾಗಿದ್ದು, ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ಹೈಕಮಾಂಡ್ ಸೂಚಿಸಿದೆ.
ಡಿ.ಕೆ ಶಿವಕುಮಾರ್ ಕರ್ನಾಟಕದ ನೂತನ ಸಿಎಂ: CLP ಸಭೆಯಲ್ಲಿ ಅಧಿಕೃತವಾಗಿ ಹೆಸರು ಘೋಷಣೆ
ರಾಜ್ಯ ರಾಜಕಾರಣದ ತೀವ್ರ ಕುತೂಹಲಕ್ಕೆ ತೆರೆ ಬಿದ್ದಿದ್ದು, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಈ ಅಧಿಕೃತ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಮುಂದಿನ ಸಿಎಂ ಆಗುವುದು ನಿಶ್ಚಿತವಾಗಿತ್ತು. ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಕ್ರಿಯೆಯಂತೆ ಅವರನ್ನು ನೂತನ ನಾಯಕನನ್ನಾಗಿ ಅಧಿಕೃತವಾಗಿ ಘೋಷಿಸಲಾಯಿತು. ಕಳೆದ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಆಗಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದ ಡಿಕೆಶಿ, ಇದೀಗ ರಾಜ್ಯದ ಅತ್ಯುನ್ನತ ಗದ್ದುಗೆಯನ್ನು ಅಲಂಕರಿಸಲಿದ್ದಾರೆ.
ಶಾಸಕರಿಗೆ ಹಸ್ತಲಾಘವ ಮಾಡಿದ ಡಿಕೆಶಿ
ಸಿಎಲ್‌ಪಿ ಸಭೆಗೆ ಆಗಮಿಸುವ ಮುನ್ನ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಕೊಠಡಿಯಲ್ಲಿ ತಮ್ಮ ಆರಾಧ್ಯ ದೈವ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಸಭೆಯಲ್ಲಿ ಎಐಸಿಸಿ ವೀಕ್ಷಕರಾಗಿ ಹಿರಿಯ ನಾಯಕರಾದ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಿದ್ದರು. ಸಭೆಯ ಆರಂಭದಲ್ಲಿ ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಭಾಂಗಣದಲ್ಲಿದ್ದ ಪ್ರತಿಯೊಬ್ಬ ಶಾಸಕರಿದ್ದ ಜಾಗಕ್ಕೆ ಖುದ್ದಾಗಿ ತೆರಳಿ ಹಸ್ತಲಾಘವ (Handshake) ಮಾಡುವ ಮೂಲಕ ಗಮನ ಸೆಳೆದರು.








