ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಬಹುಕಾಲದ ನಿರೀಕ್ಷೆಗೆ ತೆರೆ ಬಿದ್ದಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದ್ದು, ಮುಂಬರುವ ಸೋಮವಾರ ಅಥವಾ ಬುಧವಾರದ ಶುಭ ದಿನದಂದು ಗೋಧೂಳಿ ಮುಹೂರ್ತದಲ್ಲಿ ‘ಕನಕಪುರ ಬಂಡೆ’ ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕರ ಮಹತ್ವದ ಸಭೆ ಆಯೋಜಿಸಲಾಗಿದೆ. ಎಐಸಿಸಿ ವೀಕ್ಷಕರು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಒಮ್ಮತದ ನಾಯಕನನ್ನು ಆರಿಸಲು ಹೈಕಮಾಂಡ್ ತಂತ್ರ ರೂಪಿಸಿದೆ.
ವಿಶೇಷವೆಂದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಮುಂದಿನ ಸಿಎಲ್ಪಿ ನಾಯಕರೆಂದು ಪ್ರಸ್ತಾಪಿಸಲಿದ್ದಾರೆ. ಹಿರಿಯ ಶಾಸಕರು ಇದಕ್ಕೆ ಅನುಮೋದನೆ ನೀಡಲಿದ್ದು, ಕೇವಲ ಒಂದು ಸಾಲಿನ ನಿರ್ಣಯದ ಮೂಲಕ ಪ್ರಕ್ರಿಯೆ ಮುಗಿಯಲಿದೆ. ಶಾಸಕರಿಗೆ ವೈಯಕ್ತಿಕ ಅಭಿಪ್ರಾಯ ಮಂಡನೆಗೆ ಅವಕಾಶ ಇರುವುದಿಲ್ಲ. ಸಭೆಯ ಬಳಿಕ ಡಿ.ಕೆ.ಶಿ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಹೊಸ ಸರ್ಕಾರ ಬರುವವರೆಗೆ ಅವರು ಉಸ್ತುವಾರಿ ಸಿಎಂ ಆಗಿ ಮುಂದುವರಿಯಲಿದ್ದಾರೆ.
ವಿಧಾನಸೌಧದ ಮುಂಭಾಗ ಭವ್ಯ ವೇದಿಕೆ: 10 ಸಚಿವರ ಟೀಮ್!
ತಮ್ಮ ಜೀವಮಾನದ ಕನಸಿನಂತೆ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ದೇಶದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ.
ಡಿ.ಕೆ.ಶಿ ಅವರೊಂದಿಗೆ ಮೊದಲ ಹಂತದಲ್ಲಿ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಇದರಲ್ಲಿ ಎಷ್ಟು ಜನರಿಗೆ ಉಪಮುಖ್ಯಮಂತ್ರಿ (DCM) ಪಟ್ಟ ಸಿಗಲಿದೆ ಎಂಬುದು ಸಸ್ಪೆನ್ಸ್ ಆಗಿದೆ. ಸಿಎಂ ಸ್ಥಾನದ ಜೊತೆಗೆ ಆಯಕಟ್ಟಿನ ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳನ್ನು ಶಿವಕುಮಾರ್ ತಮ್ಮ ಬಳಿಯೇ ಉಳಿಸಿಕೊಳ್ಳಲಿದ್ದಾರೆ. ಜಲಸಂಪನ್ಮೂಲ ಹಾಗೂ ಗುಪ್ತಚರ ಇಲಾಖೆಗಳು ಯಾರ ಪಾಲಾಗಲಿವೆ ಎಂಬ ಕುತೂಹಲ ಮೂಡಿದೆ.
‘ಡಿಕೆಶಿ ಮಾಡೆಲ್’ ಅನ್ವಯ ತಮಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನ ಎರಡೂ ಬೇಕು ಎಂದು ಸತೀಶ್ ಜಾರಕಿಹೊಳಿ ಹಠ ಹಿಡಿದಿದ್ದಾರೆ. ಭವಿಷ್ಯದ ಅಹಿಂದ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ಜಾರಕಿಹೊಳಿ ಅವರಿಗೆ ಸದ್ಯಕ್ಕೆ ಕೆಪಿಸಿಸಿ ಜವಾಬ್ದಾರಿಗೆ ಸಜ್ಜಾಗುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ ಎನ್ನಲಾಗಿದೆ.








