ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಬಿರುಸುಗೊಂಡಿದ್ದು, ಇಂದು (ಶನಿವಾರ) ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆ ಕರೆಯಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಸೂಚಿಸಲಿದ್ದಾರೆ. ಶಾಸಕಾಂಗ ಪಕ್ಷದ ಸದಸ್ಯರು ಇದನ್ನು ಅವಿರೋಧವಾಗಿ ಅನುಮೋದಿಸಲಿದ್ದು, ತದನಂತರ ನೂತನ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಹೊಸ ಸರ್ಕಾರ ರಚನೆ ಸಂಬಂಧ ಚರ್ಚಿಸಲು ದೆಹಲಿಗೆ ತೆರಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ಅವರ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ.
ಇಂದು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡನೆ
ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ ಬಳಿಕ, ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ನಾಯಕರ ಜೊತೆಗೂಡಿ ಇಂದು ಸಂಜೆಯೇ ರಾಜಭವನಕ್ಕೆ ತೆರಳಲಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಅಥವಾ ನಾಡಿದ್ದು ಪ್ರಮಾಣವಚನ ಸ್ವೀಕಾರ?
ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮ ಯಾವಾಗ ನಡೆಯಲಿದೆ ಎಂಬುದು ಇಂದಿನ ಸಭೆಯಲ್ಲಿ ಅಂತಿಮವಾಗಲಿದೆ. ಬಹುತೇಕ ಭಾನುವಾರ (ನಾಳೆ) ಅಥವಾ ಸೋಮವಾರ (ನಾಡಿದ್ದು) ಶಪಥ ಗ್ರಹಣ ನಡೆಯಬಹುದು ಎನ್ನಲಾಗುತ್ತಿದೆ.
ಜ್ಯೋತಿಷಿಗಳ ಸಲಹೆ: ಡಿ.ಕೆ. ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಅವರು ಮೇ 31, ಜೂನ್ 5 ಮತ್ತು ಜೂನ್ 6ರ ದಿನಾಂಕಗಳನ್ನು ಸೂಚಿಸಿದ್ದರೆ, ಅವರ ಪರಮ ಭಕ್ತರಾಗಿರುವ ಅಜ್ಜಯ್ಯ ಅವರು ಜೂನ್ 1, ಜೂನ್ 3 ಮತ್ತು ಜೂನ್ 5ರ ದಿನಾಂಕಗಳನ್ನು ಉತ್ತಮ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಭರದ ಸಿದ್ಧತೆ!
ನೂತನ ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮಕ್ಕಾಗಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ವೇದಿಕೆ ನಿರ್ಮಾಣ ಕಾರ್ಯ ಮತ್ತು ಭರದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ.








