ಚಿಕ್ಕಮಗಳೂರು: ಡಿಸೆಂಬರ್ 6 ರಿಂದ ಮೂರು ದಿನಗಳ ಕಾಲ ದತ್ತಜಯಂತಿ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರಿಂದ ಸರ್ಪಗಾವಲು ಇರಲಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆಯನ್ನು ಈಗಾಗಲೇ ವಹಿಸಲಾಗಿದೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾಹಿತಿ ನೀಡಿದ್ದಾರೆ.
ಸುಗಮ ಸಂಚಾರ ದೃಷ್ಠಿಯಿಂದ ರಸ್ತೆ ದುರಸ್ಥಿ ಕಾರ್ಯ ನಡೆಸಲಾಗಿದ್ದು, ತಾತ್ಕಾಲಿಕ ಆರೋಗ್ಯ ಸೌಲಭವನ್ನು ಒದಗಿಸಲು 3 ದಿನದ ಮಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗುವುದು.
ಹೊನ್ನಮ್ಮನ ಹಳ್ಳದಲ್ಲಿ ಭಕ್ತರು ಸ್ನಾನ ಮಾಡಲು ಮೆಟ್ಟಿಲು, ಕಟ್ಟೆ ನಿರ್ಮಾಣ ಮಾಡಲಾಗಿದೆ. ದತ್ತ ಜಯಂತಿ ಮುಗಿಯುವವರೆಗೂ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಭಕ್ತರು ಬೆಟ್ಟಕ್ಕೆ ತೆರಳಲು ಅನುಕೂಲವಾಗುವಂತೆ ಖಾಸಗಿ ಸಂಘ ಸಂಸ್ಥೆಯವರೊಂದಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕುಡಿಯುವ ನೀರು ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 6 ರಿಂದ 8 ವರೆಗೆ ದತ್ತ ಜಯಂತಿ ನಡೆಯಲಿದ್ದು, 6 ರಂದು ಅನುಸೂಯ ಜಯಂತಿ ನಡೆಯಲಿದೆ.
ಅಂದು ಬೋಳರಾಮೇಶ್ವರ ದೇವಸ್ಥಾನದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುವರೆಗೂ ಮೆರವಣಿಗೆ ನಡೆಯಲಿದೆ. ಸುಮಾರು 5 ರಿಂದ 6 ಸಾವಿರ ಜನರು ಸೇರುವ ಮಾಹಿತಿ ಇದೆ. ಡಿ. 7ರಂದು ನಗರದ ಕಾಮಧೇನು ಗಣಪತಿ ದೇವಸ್ಥಾನ ಆವರಣದಿಂದ ಆಜಾದ್ಪಾರ್ಕ್ ವೃತ್ತದವರೆಗೂ ಶೋಭಾಯಾತ್ರೆ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಜನ ಸೇರುವ ಬಗ್ಗೆ ಮಾಹಿತಿ ಇದೆ. ಡಿ. 8ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ನಡೆಯಲಿದೆ.
ಈ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕ್ಯಾಮೆರಾ, ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ದತ್ತ ಜಯಂತಿ ಕಾರ್ಯಕ್ರಮಗಳ ದಿನದಂದು ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡು ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟರ್ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅನ್ಯ ಧರ್ಮ ಜನರ ಭಾವನೆಗೆ ಧಕ್ಕೆಯಾಗುಂತಹ ಘೋಷಣೆಗಳನ್ನು ಕೂಗದಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ದತ್ತಜಯಂತಿ ಹಿನ್ನೆಲೆ ಡಿಸೆಂಬರ್ 5ರ ಬೆಳಿಗ್ಗೆ 6 ಗಂಟೆಯಿಂದ ಡಿ. 9ರ ಬೆಳಿಗ್ಗೆ 10 ಗಂಟೆಯವರೆ ಮುಳ್ಳಯ್ಯನಗಿರಿ ಭಾಗದ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ತಿಳಿಸಿದ್ದಾರೆ.