ಸೈಬರ್ ವಂಚಕರನ್ನು ಸಮಾಜದ “ಪರಾವಲಂಬಿಗಳು” (Parasites) ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಅಮಾಯಕ ನಾಗರಿಕರಿಗೆ ವಂಚಿಸುವವರ ವಿರುದ್ಧ ಅತ್ಯಂತ ಕಠಿಣವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಬುಧವಾರ ಹೇಳಿದೆ. ಇಂತಹ ಅಪರಾಧಿಗಳು ಜೈಲಿನ ಒಳಗಿದ್ದಾಗ ಮಾತ್ರ ಸಮಾಜದ ಹಿತಾಸಕ್ತಿಯನ್ನು ಉತ್ತಮವಾಗಿ ಕಾಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ತನ್ನ ಮೇಲಿರುವ ವಿವಿಧ ಪ್ರಕರಣಗಳನ್ನು ಒಟ್ಟಿಗೆ ಸೇರಿಸುವಂತೆ ಮತ್ತು ಜಾಮೀನು ನೀಡುವಂತೆ ಕೋರಿ ಸೈಬರ್ ಅಪರಾಧದ ಆರೋಪಿಯೊಬ್ಬ ಸಲ್ಲಿ ಸಿದ್ದ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, “ನೀವೆಲ್ಲ ಸಮಾಜದ ಪರಾವಲಂಬಿ ಕೀಟಗಳು,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಬಿಹಾರ, ತಮಿಳುನಾಡು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಸೈಬರ್ ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಮನೋಜ್ ಕುಮಾರ್ ಸಿಂಗ್ ಎಂಬಾತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಕಠಿಣ ಮಾತುಗಳನ್ನು ಹೇಳಿದೆ.
”ನೀವು ಜನರಿಂದ ಹೂಡಿಕೆಯ ಹೆಸರಿನಲ್ಲಿ ಹಣವನ್ನು ಪಡೆದು ಅವರಿಗೆ ವಂಚಿಸುತ್ತೀರಿ. ನಿಮ್ಮ ವಿಷಯದಲ್ಲಿ ನಾವು ಅತ್ಯಂತ ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ. ನೀವು ಜೈಲಿನ ಒಳಗಿದ್ದಾಗ ಮಾತ್ರ ಸಮಾಜಕ್ಕೆ ಒಳ್ಳೆಯದು, ಹೊರಗಿದ್ದಾಗ ಅಲ್ಲ,” ಎಂದು ಪೀಠವು ಹೇಳಿದೆ.
ಒಂದು ಪ್ರದೇಶದಲ್ಲಿ ಅಪರಾಧ ಎಸಗಿ, ನಂತರ ಬಂಧನದಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ತಮ್ಮ ನೆಲೆಯನ್ನು ಬದಲಾಯಿಸುವ ಇಂತಹ ಆರೋಪಿಗಳ ವಿಶಿಷ್ಟ ಕಾರ್ಯವಿಧಾನವನ್ನು (Modus Operandi) ನ್ಯಾಯಾಲಯವು ಗಮನಿಸಿದೆ. “ನೀವು ದೇಶಾದ್ಯಂತ ಸಂತ್ರಸ್ತರನ್ನು ಹೊಂದಿರುವ ಸಾರ್ವಜನಿಕ ಉಗ್ರ ಅಪರಾಧಿಗಳು. ತಮಿಳುನಾಡಿನಲ್ಲಿ ಯಾರಿಗೋ ವಂಚಿಸಿ, ತಕ್ಷಣವೇ ಜಮ್ಮು ಮತ್ತು ಕಾಶ್ಮೀರಕ್ಕೆ ಓಡಿಹೋಗುತ್ತೀರಿ,” ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ತನ್ನ ಅರ್ಜಿಯಲ್ಲಿ ಸಿಂಗ್, ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಭವಿಷ್ಯದಲ್ಲಿ ತನ್ನ ವಿರುದ್ಧ ಇನ್ನೂ ಹೆಚ್ಚಿನ ಪ್ರಕರಣಗಳು ದಾಖಲಾಗಬಹುದು ಎಂಬ ಆತಂಕವಿದೆ ಎಂದು ತಿಳಿಸಿದ್ದನು. ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಮ್ಮು ಪೊಲೀಸರು ಮತ್ತು ತಮಿಳುನಾಡಿನ ತಿರುಪುರ್ ಪೊಲೀಸರು ಈತನ ವಿರುದ್ಧ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದರು.
ಇದೇ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ದೇಶದಲ್ಲಿ ನಡೆಯುತ್ತಿರುವ ‘ಡಿಜಿಟಲ್ ಅರೆಸ್ಟ್’ (Digital Arrest) ವಂಚನೆ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದೆ. ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಮತ್ತು ನಕಲಿ ಕೋರ್ಟ್ ಆದೇಶಗಳನ್ನು ತೋರಿಸಿ ಅಮಾಯಕ ನಾಗರಿಕರನ್ನು, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ಕಷ್ಟದ ಉಳಿತಾಯವನ್ನು ದೋಚುವ ಸೈಬರ್ ವಂಚಕರ ವಿರುದ್ಧ ನ್ಯಾಯಾಲಯವು ಅತ್ಯಂತ ಕಠಿಣ ನಿಲುವನ್ನು ತಳೆದಿದೆ.








