ನವದೆಹಲಿ:ಅಮೆರಿಕವು ಇರಾನ್ ಬಂದರುಗಳ ಮೇಲೆ ಕಟ್ಟುನಿಟ್ಟಿನ ನೌಕಾಪಡೆ ದಿಗ್ಬಂಧನ ಹೇರಿರುವ ಬೆನ್ನಲ್ಲೇ, ಸುಮಾರು 20 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಹೊತ್ತ ಇರಾನ್‌ನ ಬೃಹತ್ ತೈಲ ನೌಕೆಯೊಂದು ಗುಜರಾತ್ ಕರಾವಳಿಯ ಸಮೀಪ ಅನಿರೀಕ್ಷಿತವಾಗಿ ಬಂದು ನಿಂತಿದೆ. ಯಾವುದೇ ಮೊದಲೇ ಘೋಷಿತವಾದ ಗುರಿ ಅಥವಾ ಖರೀದಿದಾರರಿಲ್ಲದೆ ಬಂದಿರುವ ಈ ಹಡಗಿನಿಂದ ತೈಲ ಖರೀದಿಸಲು ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು (Refiners) ಹಿಂದೇಟು ಹಾಕುತ್ತಿವೆ ಎಂದು ವರದಿಯಾಗಿದೆ.
ಶಿಪ್ ಟ್ರ್ಯಾಕಿಂಗ್ ಡೇಟಾ ಮತ್ತು ಉದ್ಯಮದ ಮೂಲಗಳ ಪ್ರಕಾರ, ‘ಡೆರ್ಯಾ’ (Derya) ಹೆಸರಿನ ಈ ಬೃಹತ್ ತೈಲ ನೌಕೆಯು ಮಂಗಳವಾರ ಗುಜರಾತ್ ಕರಾವಳಿಯನ್ನು ತಲುಪಿದೆ.ಈ ಹಡಗು ಮಾರ್ಚ್ 28 ರಂದು ಇರಾನ್‌ನಲ್ಲಿ ತೈಲ ತುಂಬಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕವು ಮಾರ್ಚ್ 20 ರ ಮೊದಲು ಲೋಡ್ ಆದ ತೈಲಕ್ಕೆ ಮಾತ್ರ ರಿಯಾಯಿತಿ ನೀಡಿತ್ತು. ಹೀಗಾಗಿ, ಈ ಹಡಗಿನಿಂದ ತೈಲ ಖರೀದಿಸಿದರೆ ಅಮೆರಿಕದ ದ್ವಿತೀಯ ಹಂತದ ನಿರ್ಬಂಧಗಳಿಗೆ (Secondary Sanctions) ಗುರಿಯಾಗಬೇಕಾದೀತು ಎಂಬ ಭಯ ಭಾರತೀಯ ಕಂಪನಿಗಳಲ್ಲಿದೆ.
ಹಡಗಿಗೆ ಸದ್ಯಕ್ಕೆ ಯಾವುದೇ ಅಧಿಕೃತ ಖರೀದಿದಾರರಿಲ್ಲ. ಕಳೆದ ಕೆಲವು ದಿನಗಳ ಹಿಂದೆ ‘ಜಯಾ’ ಮತ್ತು ‘ಫೆಲಿಸಿಟಿ’ ಎಂಬ ಎರಡು ಇರಾನ್ ನೌಕೆಗಳು ಭಾರತಕ್ಕೆ ತೈಲ ತಂದಿದ್ದವು, ಆದರೆ ಅವುಗಳು ಅಮೆರಿಕ ನೀಡಿದ್ದ ರಿಯಾಯಿತಿ ಅವಧಿಯೊಳಗೆ ಬಂದಿದ್ದವು.
ಭಾರತೀಯ ಕಂಪನಿಗಳು ಇದನ್ನು ಖರೀದಿಸದಿದ್ದರೆ, ಈ ನೌಕೆಯು ತನ್ನ ತೈಲವನ್ನು ಮಾರಾಟ ಮಾಡಲು ಚೀನಾದತ್ತ ಮುಖ ಮಾಡುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.








