ಬೆಂಗಳೂರು : ಹಳೆ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದ ವಿಚಾರವಾಗಿ ಬಿಜೆಪಿಯು ಈ ಸರ್ಕಾರದ ಸಚಿವರು ಭಯೋತ್ಪಾದಕರು ಎಂದು ವಾಗ್ದಾಳಿ ನಡೆಸಿದೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇವಲ ಹಳೆ ಹುಬ್ಬಳ್ಳಿ ಗಲಭೆ ಅಷ್ಟೇ ಅಲ್ಲ ಸಿಟಿ ರವಿ, ವಿ.ಸೋಮಣ್ಣ ಪ್ರಕರಣವನ್ನು ಕೂಡ ಹಿಂಪಡೆದಿದ್ದೇವೆ. ಹಾಗಾದರೆ ಅವರೆಲ್ಲರೂ ಭಯೋತ್ಪಾದಕರ ಎಂದು ಕಿಡಿ ಕಾರಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 60 ಪ್ರಕರಣದ ಪೈಕಿ 43 ಪ್ರಕರಣವನ್ನು ವಾಪಸ್ ಪಡೆದಿದ್ದೇವೆ. ಎಲ್ಲವೂ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಮಾಡಿ ವಾಪಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ?. ವಿ.ಸೋಮಣ್ಣ ಅವರದು ನಾಲ್ಕೈದು ಕೇಸ್ ವಾಪಸ್ ಪಡೆದಿದ್ದೇವೆ. ಸಿ.ಟಿ.ರವಿ ಹಾಗೂ ಸುಕುಮಾರ್ ಶೆಟ್ಟಿ, ಮೈಸೂರು ಮಹಿಳಾ ಮೋರ್ಚಾ ಕೇಸ್ ವಾಪಸ್ ಪಡೆದಿದ್ದೇವೆ. ಇವರೆಲ್ಲರೂ ದೇಶದ್ರೋಹಿಗಳಾ?. ಇವರೆಲ್ಲರೂ ಭಯೋತ್ಪಾದನೆ ನಡೆಸುತ್ತಾರಾ?. ಏನಾದರೂ ಲಾಜಿಕ್ ಇರಬೇಕಲ್ವಾ? ಎಂದರು.
ಹಿಂದಿನ ಸರ್ಕಾರದಲ್ಲಿ ಯಾರೆಲ್ಲ ಎಷ್ಟು ಕೇಸ್ ವಾಪಸ್ ಪಡೆದಿದ್ದಾರೆ ಪಟ್ಟಿ ಮಾಡಲಿ. ಯಡಿಯೂರಪ್ಪ ಸರ್ಕಾರ 100ಕ್ಕಿಂತ ಹೆಚ್ಚು ಕೇಸ್ ವಾಪಸ್ ಪಡೆದಿತ್ತು. ಈಗ ಬಿಜೆಪಿ ಮಾಡಿದ್ದು ಎಷ್ಟು ಪ್ರತಿಭಟನೆ ಆಯ್ತು?. ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ಪವರ್ ಇದೆ. UIP ಹಾಕಿದ್ದು NIA ಅವರಲ್ಲ. ಗೃಹ ಇಲಾಖೆ ಹಾಕಿದ್ರು, ಅವರೇ ತೆಗೆಯುತ್ತಾರೆ. ಬಿಜೆಪಿಗೆ ಕಾನೂನು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.