ಚಿಕ್ಕಮಗಳೂರು: ವನ್ಯಜೀವಿಗಳಿಂದ ಬೆಳೆ ಹಾನಿಯ ದೂರು ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಿಪಿಎಸ್ ಚಿತ್ರ ಸಹಿತ ಹಾನಿಯ ನಿರ್ಧರಣೆ ಮಾಡಿ, ತ್ವರಿತವಾಗಿ ಪರಿಹಾರ ನೀಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆನೆ, ಕಾಡೆಮ್ಮೆ, ಕಾಡುಕೋಣ, ಹಂದಿಗಳಿಂದ ತೀವ್ರ ಬೆಳೆ ಹಾನಿ ಆಗುತ್ತಿದ್ದು, ಅಧಿಕಾರಿಗಳು ವಿಳಂಬ ಮಾಡದೆ ರೈತರಿಗೆ ಪರಿಹಾರ ನೀಡಬೇಕು. ಪ್ರಾಮಾಣಿಕವಾಗಿ ಬೆಳೆ ಹಾನಿಯ ನಿರ್ಧಾರ ಮಾಡಬೇಕು ಎಂದರು.
ಪ್ರಸ್ತುತ ವೃತ್ತಕ್ಕೆ 1 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಬಾಕಿ ಇರುವ ಎಲ್ಲ ಬೆಳೆ ಹಾನಿ ಪರಿಹಾರ ನೀಡುವಂತೆ ಸೂಚಿಸಿದ ಅವರು, ಆನೆ ನಿಗ್ರಹ ಕಂದಕ, ಸೌರತಂತಿಬೇಲಿಗಳ ಸಮರ್ಪಕ ನಿರ್ವಹಣೆ ಮಾಡುವಂತೆಯೂ ತಿಳಿಸಿದರು.
ಆನೆ ಸೆರೆ ತಂಡ:
ಮೂಡಿಗೆರೆ, ಕೊಪ್ಪ ಮೊದಲಾದ ಕಡೆಗಳಲ್ಲಿ ಆನೆ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲೇ ಒಂದು ಆನೆ ಸೆರೆ ಕಾರ್ಯತಂಡ ಸ್ಥಾಪಿಸುವ ಬಗ್ಗೆ ಪರಿಶೀಲಿಸಿ, ಕಾರ್ಯಸಾಧ್ಯ ವರದಿ ಕೇಳಿದ ಸಚಿವರು, ಹೊಸದಾಗಿ ಮಾಡಿರುವ ಆನೆ ಕಾರ್ಯಪಡೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆಯೂ ವರದಿ ಸಲ್ಲಿಸಲು ತಿಳಿಸಿದರು.
ರೈಲ್ವೆ ಬ್ಯಾರಿಕೇಡ್ ಅಧ್ಯಯನ ಅಗತ್ಯ:
ತಾವು ಸಚಿವರಾದ ತರುವಾಯ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಆನೆಗಳ ಉಪಟಳ ಇರುವ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಹಣ ಮಂಜೂರು ಮಾಡಿಸಿದ್ದು, ಕಾಮಗಾರಿಯೂ ಆಗಿದೆ. ಯಾವ ಯಾವ ವಲಯದಲ್ಲಿ ಎಷ್ಟು ಕಿಲೋ ಮೀಟರ್ ಬ್ಯಾರಿಕೇಡ್ ಹಾಕಲಾಗಿದೆ ಮತ್ತು ಬ್ಯಾರಿಕೇಡ್ ಅಳವಡಿಸಿದ ತರುವಾಯ ಆನೆ, ಕಾಡುಕೋಣ ಹಾವಳಿ ಕಡಿಮೆ ಆಗಿದೆಯೇ ಎಂಬ ಬಗ್ಗೆ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದರು.
ವನ್ಯಜೀವಿಗಳ ಸಾವಿಗೆ ಕಾರಣವಾಗುವ ಉರುಳು ಅಳವಡಿಸಿರುವ ತೋಟಗಳ ಪರಿಶೀಲನೆ ನಡೆಸುವಂತೆ ತಿಳಿಸಿದ ಈಶ್ವರ ಖಂಡ್ರೆ, ಹೊರಗುತ್ತಿಗೆ ಸಿಬ್ಬಂದಿಗೆ ಅಗತ್ಯ ಉಪಕರಣ, ನಿಯಮಿತವಾಗಿ ವೇತನ, ಭತ್ಯೆ ಪಾವತಿಸಲು ಸೂಚಿಸಿದರು.
ಕಳಸದಲ್ಲಿ ಕಾಡುಕೋಣದ ದಾಳಿಗೆ ಕೂಲಿ ಕಾರ್ಮಿಕ ಸಾವಿಗೀಡಾಗಿರುವ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ ಸಚಿವರು, ಕಾಡುಕೋಣ ಸೆರೆ ತರಬೇತಿ ಪಡೆದಿರುವ ಸಿಬ್ಬಂದಿಗಳನ್ನು ಸಮಸ್ಯೆ ಇರುವ ಪ್ರದೇಶಕ್ಕೆ ನಿಯೋಜಿಸಿ ಜನರ ಅಮೂಲ್ಯ ಪ್ರಾಣ ಉಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಶಾಸಕರುಗಳಾದ ರಾಜೇಗೌಡ, ತಮ್ಮಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುಲಕಿತ್ ಮೀನಾ, ರಮೇಶ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು.
BREAKING: ಭಾರತೀಯ ನೌಕೆಗಳ ಮೇಲೆ ದಾಳಿ: ಇರಾನ್ ರಾಯಭಾರಿಗೆ ಭಾರತದ ವಿದೇಶಾಂಗ ಇಲಾಖೆಯಿಂದ ಸಮನ್ಸ್!
BREAKING: ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಭಾರತದ ತೈಲ ಹಡಗಿನ ಮೇಲೆ ಇರಾನ್ ನೌಕಾಪಡೆ ಗುಂಡಿನ ದಾಳಿ!








