ನಾಸಿಕ್: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನಾಸಿಕ್ ಟಿಸಿಎಸ್ ಬಿಪಿಒ ಘಟಕದ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ಗೆ ನಾಸಿಕ್ ನ್ಯಾಯಾಲಯವು ಬಿಗ್ ಶಾಕ್ ನೀಡಿದೆ. ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿ ಆಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಇಂದು (ಏಪ್ರಿಲ್ 20, 2026) ತಿರಸ್ಕರಿಸಿದೆ.
ಅಡಿಷನಲ್ ಸೆಷನ್ಸ್ ಜಡ್ಜ್ ಕೆ.ಜಿ. ಜೋಶಿ ಅವರು ನಿದಾ ಖಾನ್ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇದರಿಂದಾಗಿ ವಿಶೇಷ ತನಿಖಾ ತಂಡಕ್ಕೆ (SIT) ಆಕೆಯನ್ನು ಬಂಧಿಸಲು ಈಗ ಯಾವುದೇ ಕಾನೂನು ಅಡ್ಡಿಯಿಲ್ಲ.
ತಾನು ಎರಡು ತಿಂಗಳ ಗರ್ಭಿಣಿಯಾಗಿದ್ದು, ಆರೋಗ್ಯದ ದೃಷ್ಟಿಯಿಂದ ಬಂಧನದಿಂದ ರಕ್ಷಣೆ ನೀಡಬೇಕು ಎಂದು ನಿದಾ ಪರ ವಕೀಲರು ವಾದಿಸಿದ್ದರು. ಆದರೆ, ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿದ ನ್ಯಾಯಾಲಯವು ತಕ್ಷಣದ ರಕ್ಷಣೆ ನೀಡಲು ಒಪ್ಪಲಿಲ್ಲ.
ಪೊಲೀಸರು ಮತ್ತು ದೂರುದಾರರಿಗೆ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿರುವ ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 27, 2026 ಕ್ಕೆ ಮುಂದೂಡಿದೆ.








