ಗದಗ : ದೇಶದಲ್ಲಿ ಸಂವಿಧಾನದ ತಿರುಚುವ ಪ್ರಯತ್ನ ಬಿಜೆಪಿ ಸದ್ದಿಲ್ಲದೆ ನಡೆಸುತ್ತಿದೆ. ಇನ್ನೊಂದೆಡೆ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ.ದೇಶದಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಮುಂಬರುವ ದಿನಗಳಲ್ಲಿ ದೇಶದಲ್ಲಿ ಆರ್ಥಿಕ ಗುಲಾಮಗಿರಿ ಅನುಭವಿಸಬೇಕಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಗುಲಾಮಗಿರಿ ತಪ್ಪಿಸಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳನ್ನಾಗಿ ಮಾಡಲಾಗುವುದು ಎಂದರು.
ಸಂವಿಧಾನ ಕಾಪಾಡಿಕೊಳ್ಳುವ, ಮೀಸಲಾತಿ ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ರಕ್ಷಣೆ ಮಾಡಬೇಕಿದೆ, ಅದಕ್ಕಾಗಿ ದೇಶದ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ದೇಶದ ರೈತರ ರೂ.72000 ಕೋಟಿ ಸಾಲಮನ್ನಾ ಮಾಡಲಾಯಿತು. ಬಿಜೆಪಿ ಅವಧಿಯಲ್ಲಿ ಅದಾನಿ, ಅಂಬಾನಿಗಳ ರೂ.6.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ, ಇದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ತಿಳಿಸಿದರು.