ಬೆಂಗಳೂರು: ಇನ್ನು 15- 20 ದಿನಗಳಲ್ಲಿ ಅಥವಾ ಚುನಾವಣೆಯ ಒಳಗೆ ಕಾಂಗ್ರೆಸ್ ( Congress ) ಮನೆಯ ಬಾಗಿಲು ಮುಚ್ಚುತ್ತಾರೆ. ಕಾಂಗ್ರೆಸ್ಸಿನ ಹತ್ತಾರು ಜನ ನಮ್ಮ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ( BJP Karnataka State President Nalin Kumar Kateel ) ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇದೊಂದು ವಿಶೇಷ ಸಂದರ್ಭ ಮಾತ್ರವಲ್ಲ; ರಾಜಕೀಯ ಬದಲಾವಣೆಯ ಸಂಕೇತವೂ ಆಗಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ತೆರಳಿದಲ್ಲೆಲ್ಲ ಕಾಂಗ್ರೆಸ್ ಪಕ್ಷ ( Congress Party ) ಸೋತಿದೆ. ಕೊಳ್ಳೇಗಾಲದಲ್ಲಿ 7ರಲ್ಲಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದೇ ಇದಕ್ಕೆ ಸಾಕ್ಷಿ ಎಂದರು.
ಬರಲ್ಲಾ ಅಂದ್ರೂ ವಧುವಿನ ಕೈ-ಕಾಲು ಹಿಡಿದು ಮನೆಗೆ ಹೊತ್ಕೊಂಡೋದ ಅತ್ತೆ ಮನೆಯವ್ರು | WATCH VIDEO
ವಿಜಾಪುರದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಕಾಂಗ್ರೆಸ್ ಮನೆ ಖಾಲಿ ಆಗುವುದರ ಸಂಕೇತ ಇದಾಗಿದೆ. ಬಿಜೆಪಿ ಕಮಲ ಮತ್ತೆ ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಯಲ್ಲಿ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರದಲ್ಲಿ ಮೋದಿಜಿ ಅವರ ಆಡಳಿತವನ್ನು ಜನರು ಒಪ್ಪಿದ್ದಾರೆ. ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೊಮ್ಮಾಯಿ ಅವರು ಎಸ್ಸಿ, ಎಸ್ಟಿ ಸಮುದಾಯಕ್ಕೆ ಹಾಗೂ ಪೌರಕಾರ್ಮಿಕರಿಗೆ ನ್ಯಾಯ ನೀಡಿದ್ದಾರೆ. ಅದರ ನಂತರ ರಾಜ್ಯದ ಚಿತ್ರಣ ಬದಲಾಗಿದೆ. ಬಿಜೆಪಿ ಗೆಲುವು ಖಚಿತವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವು ತನ್ನ ತಲೆತಲಾಂತರದ ಮತಗಳೆಂದು ನಂಬಿದ್ದ ಮತಗಳು ಕೈಬಿಟ್ಟು ಹೋಗಿವೆ. ಕಾರ್ಯಕರ್ತರೇ ಆ ಪಕ್ಷವನ್ನು ಕೈಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ನುಡಿದರು.
ಕಲ್ಬುರ್ಗಿಯ ಒಬಿಸಿ ಸಮಾವೇಶದಲ್ಲಿ 4ರಿಂದ 5 ಲಕ್ಷ ಜನ ಸೇರಿದ್ದರು. 40- 50 ಸಾವಿರ ಜನ ಎಂದಿರುವ ಸಿದ್ದರಾಮಣ್ಣನಿಗೆ ವೈದ್ಯರಾದ ಅಶ್ವತ್ಥನಾರಾಯಣ್ ಅವರು ಬೇರೆ ಕನ್ನಡಕ ಕೊಡಿಸಬೇಕು ಎಂದು ವ್ಯಂಗ್ಯವಾಗಿ ತಿಳಿಸಿದರು. ಕಾಂಗ್ರೆಸ್ ನವರಂತೆ ನಾವು ಬಿರಿಯಾನಿ, ಹೆಂಡ ಕೊಟ್ಟು ಜನ ತರಿಸಲಿಲ್ಲ. ಜನ ಸ್ವಯಂಪ್ರೇರಿತರಾಗಿ ಬಂದಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೋಲುವ ಭಯ ಕಾಡುತ್ತಿದೆ ಎಂದ ಅವರು, ಬಿಜೆಪಿಗೆ ಬಂದವರೆಲ್ಲರೂ ನಾಯಕರಾಗಿದ್ದಾರೆ. ಹಾಲಿನೊಳಗೆ ಸಕ್ಕರೆ ಬೆರೆತಂತೆ ಸಿಹಿ ಮಾತ್ರ ಇರಬೇಕು. ನಮ್ಮೊಳಗೆ ಒಂದಾಗಬೇಕು ಎಂದು ಕಿವಿಮಾತು ಹೇಳಿದರು. ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿತ್ತು. ಅವರಿಗೆ ಕಾಂಗ್ರೆಸ್ ಪಕ್ಷದ ನೈಜ ಬಣ್ಣದ ಅರಿವಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಕಾಂಗ್ರೆಸ್ ಪಕ್ಷವು ಸಿದ್ರಾಮಣ್ಣನ ನಾಟಕ ಕಂಪೆನಿ ಮತ್ತು ಡಿಕೆಶಿ ನಾಟಕ ಕಂಪೆನಿಯಾಗಿ ಎರಡು ಗುಂಪಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತದೆ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಸಚಿವ ಗೋವಿಂದ ಕಾರಜೋಳ, ಎಸ್.ಟಿ. ಸೋಮಶೇಖರ್, ಡಾ|| ಸಿ.ಎನ್. ಅಶ್ವತ್ಥನಾರಾಯಣ್, ಭೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ರಾಜ್ಯ ಉಪಾಧ್ಯಕ್ಷ ಲಕ್ಷಣ ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಜಿ ಸಂಸದ ಮುದ್ದಹನುಮೇಗೌಡ, ಕನ್ನಡ ಚಲನಚಿತ್ರ ನಟ ಮತ್ತು ಮಾಜಿ ಸಂಸದ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್, ಶೀಲಾ ದೀಕ್ಷಿತ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ರಮೇಶ್ ಮುನಿಯಪ್ಪ, ಕಾಂಗ್ರೆಸ್ ಸೇವಾದಳದ ರಾಜ್ಯ ಉಪಾಧ್ಯಕ್ಷ ಹನುಮಂತರಾವ್ ಜವಳಿ ಮತ್ತಿತರರು ಬಿಜೆಪಿ ಸೇರಿದರು. ಇವರಲ್ಲದೆ ಕೆ.ಪಿ.ಸಿ.ಸಿ ಸದಸ್ಯ ಹಾಗೂ ತೆಂಗು ನಾರು ಮಂಡಳಿ ಮಾಜಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್.ವೈ.ರವಿಕುಮಾರ್, ರಾಜ್ಯ ರೈತ ಸಂಘದ ನಾಯಕ ಸಂಜೀವ ರೆಡ್ಡಿ, ದಲಿತ ಮುಖಂಡ ವೆಂಕಟೇಶಮೂರ್ತಿ ಅವರೂ ಪಕ್ಷ ಸೇರಿದರು.