ಮುಂದಿನ ಐದು ವರ್ಷಗಳಲ್ಲಿ ಭಾರತವು ಅಮೆರಿಕದಿಂದ 500 ಶತಕೋಟಿ ಅಮೆರಿಕನ್ ಡಾಲರ್ ($500 Billion) ಮೌಲ್ಯದ ಸರಕುಗಳನ್ನು ಖರೀದಿಸಲು ಬದ್ಧವಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ “ಆಪ್ತ ಸ್ನೇಹಿತ” ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಓಲೈಸಲು ನಿಯಮಗಳನ್ನು ಮೀರಿ ಹೆಜ್ಜೆ ಇಡುತ್ತಿದ್ದಾರೆ ಎಂಬ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಭಾನುವಾರ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದೆ.
ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್ ರಮೇಶ್ ಅವರು ಈ ಕುರಿತು ಕೇಂದ್ರ ಸರ್ಕಾರದಿಂದ ಉತ್ತರವನ್ನು ಕೇಳಿದ್ದು, ಮಲೇಷ್ಯಾದಂತಹ ದೇಶಗಳು ಮಾಡಿದಂತೆ ಅಮೆರಿಕದೊಂದಿಗಿನ “ಜನವಿರೋಧಿ” ಮತ್ತು “ಅಪಾಯಕಾರಿ” ವ್ಯಾಪಾರ ಒಪ್ಪಂದವನ್ನು ಧಿಕ್ಕರಿಸುವ “ಧೈರ್ಯವನ್ನು” ಭಾರತ ಸರ್ಕಾರ ಏಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಿದೇಶಿ ವಿನಿಮಯವನ್ನು ಉಳಿಸಲು ದೇಶೀಯ ಇಂಧನ ಬಳಕೆ ಮತ್ತು ವಿದೇಶಿ ಪ್ರವಾಸಗಳನ್ನು ಕಡಿತಗೊಳಿಸುವಂತೆ ಸ್ವತಃ ಪ್ರಧಾನಿಯವರೇ ಸಾರ್ವಜನಿಕವಾಗಿ ನಾಗರಿಕರಲ್ಲಿ ವಿನಂತಿಸಿರುವಾಗ, ಮೋದಿ ಸರ್ಕಾರವು ಅಮೆರಿಕದಿಂದ ಇಷ್ಟೊಂದು ಭಾರಿ ಪ್ರಮಾಣದ ಆಮದನ್ನು ಸ್ವೀಕರಿಸಲು ಹೇಗೆ ಒಪ್ಪಿಕೊಂಡಿತು ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಇದಲ್ಲದೆ, ಈ ರೀತಿಯ ದಿಢೀರ್ ಆಮದು ಹೆಚ್ಚಳವು ಭಾರತೀಯ ರೂಪಾಯಿ ಮೌಲ್ಯದ ಮತ್ತಷ್ಟು ಕುಸಿತಕ್ಕೆ (Depreciation) ಕಾರಣವಾಗುವುದಿಲ್ಲವೇ? ಎಂದೂ ಅವರು ಪ್ರಶ್ನಿಸಿದ್ದಾರೆ.
”2025ರ ಮೇ 10 ರಂದು, ‘ಆಪರೇಷನ್ ಸಿಂದೂರ್’ ಅನ್ನು ಅನಿರೀಕ್ಷಿತವಾಗಿ ಸ್ಥಗಿತಗೊಳಿಸಿದ ಕದನ ವಿರಾಮದ (Ceasefire) ಮೊದಲ ಘೋಷಣೆಯನ್ನು ಮಾಡಿದ್ದು ಇದೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ. ಅಧ್ಯಕ್ಷ ಟ್ರಂಪ್ ಅವರ ಮಧ್ಯಸ್ಥಿಕೆಯಿಂದಾಗಿಯೇ ಈ ಕದನ ವಿರಾಮ ಸಾಧ್ಯವಾಯಿತು ಎಂದು ಅವರು ಆಗ ಪ್ರತಿಪಾದಿಸಿದ್ದರು,” ಎಂದು ರಮೇಶ್ ತಮ್ಮ ಹೇಳಿಕೆಯಲ್ಲಿ ನೆನಪಿಸಿದ್ದಾರೆ.
2026ರ ಮೇ 21 ರಂದು, ವೆನೆಜುವೆಲಾ ಅಧ್ಯಕ್ಷರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯನ್ನು ಸಹ ಮೊದಲು ಪ್ರಕಟಿಸಿದ್ದು ಇದೇ ರೂಬಿಯೊ ಅವರಾಗಿದ್ದರು. ಭಾರತ ಮತ್ತು ವೆನೆಜುವೆಲಾ ದೇಶಗಳು ಈ ಭೇಟಿಯ ಬಗ್ಗೆ ಯಾವುದೇ ಸುಳಿವು ನೀಡುವ ಅಥವಾ ಖಚಿತಪಡಿಸುವ ಮುನ್ನವೇ ರೂಬಿಯೊ ಈ ಪ್ರಕಟಣೆ ಹೊರಡಿಸಿದ್ದರು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.








