ಮಂಗಳೂರು: ಕರಾವಳಿಯಲ್ಲಿ ಕಳೆದ 30 ವರ್ಷದಿಂದ ಕಮಲವನ್ನ ನೋಡಿರುವ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ ಪ್ರದರ್ಶಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಕೈ ಕಾರ್ಯಕರ್ತರು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪಣ ತೊಟ್ಟಿದ್ದಾರೆ. ಕರಾವಳಿಯ ಜನರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳಿದ 30 ವರ್ಷಗಳಿಂದ ಜನರು ಬಿಜೆಪಿಯನ್ನ ನೋಡಿ ಆಗಿದೆ. ಈ ಬಾರಿ ಕರಾವಳಿ ಭಾಗದ ಜನರು ಬದಲಾವಣೆ ಬಯಸಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಬಿಜೆಪಿ ಯಾವ ರೀತಿ ಅಧಿಕಾರ ದುರಪಯೋಗ ಮಾಡಿಕೊಳ್ಳಿತ್ತಿದೆ ಎಂಬುದನ್ನ ಜನರು ನೋಡುತ್ತಿದ್ದಾರೆ. ಎಲೆಕ್ಟೋರಲ್ ಬಾಂಡ್ ಬಗ್ಗೆ ಬಿಜೆಪಿಯವರ ಬಳಿ ಉತ್ತರವಿಲ್ಲ. ಕೇಂದ್ರ ಬಿಜೆಪಿ ಸರ್ಕಾರದ ತಾರತಮ್ಯ ನೀತಿಗಳು ಇಂದು ಜನರಿಗೆ ಅರ್ಥವಾಗುತ್ತಿದೆ. ದಕ್ಷಿಣ ಕನ್ನಡಲ್ಲಿ ಸಾಮರಸ್ಯ ನೆಲೆಗೊಳ್ಳಬೇಕು. ಪ್ರಮುಖವಾಗಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಜನರು ಕೂಡ ಹೊಸ ಆಲೋಚನೆ ಕುಡಿಯೊಡೆದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದು ಬಳಿಕ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಬೃಹತ್ ಮೆರವಣಿಗೆಯಲ್ಲಿ ಸಾಗಿ ಪಕ್ಷದ ಮುಖಂಡರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ನಾಮಪತ್ರ ಸಲ್ಲಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ, ಜಿಲ್ಲಾ ಚುನಾವಣಾ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಜೆ.ಆರ್.ಲೋಬೊ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಇನಾಯತ್ ಅಲಿ ಮತ್ತಿತರರು ಉಪಸ್ಥಿತರಿದ್ದರು.
BREAKING : ಬಂಧನ ಪ್ರಶ್ನಿಸಿ ದೆಹಲಿ ಸಿಎಂ ‘ಕೇಜ್ರಿವಾಲ್’ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್