ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ( Congress Government ) ಅವಧಿಯಲ್ಲಿ 100% ಭ್ರಷ್ಟಾಚಾರ ನಡೆದಿದ್ದು, ಅಧಿಕಾರದಲ್ಲಿದ್ದಾಗ ಹಗರಣಗಳಲ್ಲೇ ಮುಳುಗಿದ್ದ ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದ್ದಾರೆ.
ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿದ್ದ ಭಾರತೀಯ ಜನತಾ ಪಕ್ಷದ ( Bharatiya Janata Party – BJP ) ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಪ್ರತಿ ಮೂರು ತಿಂಗಳಿಗೆ ಒಮ್ಮೆ ಯಾವುದಾದರೂ ಪಕ್ಷ ರಾಜ್ಯ ಕಾರ್ಯಕಾರಿಣಿ ಮಾಡುತ್ತಿದ್ದರೆ ಅದು ಬಿಜೆಪಿ ಮಾತ್ರ. ಯಾಕೆಂದರೆ ನಮಗೆ ಕಾರ್ಯಸೂಚಿ ಇದೆ. ಅದರ ಅನುಗುಣವಾಗಿ ಕಾರ್ಯಕ್ರಮ ಇದೆ. ಅದರ ಕಾರ್ಯ ಸಾಧ್ಯವನ್ನು ಅವಲೋಕನ ಮಾಡಲು ಕಾರ್ಯಕಾರಿಣಿಯನ್ನು ಮಾಡುತ್ತೇವೆ ಎಂದು ಹೇಳಿದರು.
ಇಡೀ ಭಾರತ ದೇಶದಲ್ಲಿ ಸದಾ ಚಲನಶೀಲ ಇರುವ, ಜನರಿಗೆ ಹತ್ತಿರ ಇರುವ, ಅವರ ಭಾವನೆಗಳಿಗೆ ಸ್ಪಂದಿಸುವ ಜನಕ್ಕಾಗಿ ರಾಜಕಾರಣ ಮಾಡುತ್ತಿರುವ ಒಂದು ಪಕ್ಷ ಎಂದರೆ ಅದು ಭಾರತೀಯ ಜನತಾ ಪಕ್ಷ. ನಾವು ನಮ್ಮ ಕಾರ್ಯಕ್ರಮಗಳನ್ನು ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅವಲೋಕನ ಮಾಡಲು ಇದು ಒಂದು ಉತ್ತಮ ವೇದಿಕೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ
ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ, ಅದೇ ಮಾರ್ಗದಲ್ಲಿ ದೇಶದ ಭವಿಷ್ಯವನ್ನು ಬರೆಯುವ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರುಗಳ ಸಮರ್ಥ ನಾಯಕತ್ವದಲ್ಲಿ ಮಹತ್ವಾಕಾಂಕ್ಷಿಯ ತತ್ವಗಳನ್ನು ಪಾಲನೆ ಮಾಡಿಕೊಂಡು ನಾವು ಮುನ್ನಡೆಯುತ್ತಿದ್ದೇವೆ. ನಮ್ಮ ಪಕ್ಷದ ಮೇಲೆ ಜನ ಇಟ್ಟಿರುವ ವಿಶ್ವಾಸ ಬೇರೆ ಯಾವುದೇ ಪಕ್ಷದ ಮೇಲೆ ಇಟ್ಟಿಲ್ಲ. ಇದಕ್ಕೆ ಬಿಜೆಪಿ ನೇತೃತ್ವದಲ್ಲಿ ದೇಶದ 18 ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವುದೇ ಸಾಕ್ಷಿ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ನಮಗೆ ನಂಬಿಕೆಯಿದೆ. ಇದು ಯಶಸ್ವಿ ಆಗಬೇಕೆಂದರೆ ರಾಜ್ಯಗಳ ಒಕ್ಕೂಟ ವ್ಯವಸ್ಥೆ ಗಟ್ಟಿಯಾಗಬೇಕು. ಇದರ ಜತೆಯನ್ನು ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಸಮಾನತೆ ಕೇವಲ ಭಾಷಣದ ಸರಕಾಗದೇ ನಾವು ಪ್ರತಿಪಾದಿಸುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳಾಗಿದೆ. ಇದಕ್ಕೂ ಮುನ್ನ ಅತಿ ಕಡಿಮೆ ಸ್ಥಾನ ಪಡೆದಿದ್ದ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸರ್ಕಾರ ಜನಸಾಮಾನ್ಯರ ಮನ್ನಣೆಯಿಂದ ಆಗಬೇಕು. ಆದರೆ ಅದನ್ನು ಧಿಕ್ಕರಿಸಿ, ಚುನಾವಣೆಯ ಫಲಿತಾಂಶವನ್ನು ಧಿಕ್ಕರಿಸಿ ವಾಮಮಾರ್ಗದಿಂದ ಅಧಿಕಾರ ಹಿಡಿದರು. ಆ ಸರ್ಕಾರ ಪಾಪದ ನೆಲೆಗಟ್ಟಿನ ಮೇಲೆ ನಿಂತಿದ್ದರಿಂದ ಬಹಳ ದಿನ ಬಾಳಲು ಆಗಲಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ದುರಾಡಳಿತ ಇನ್ನೂ ಹಸಿರಾಗಿದೆ
ಅದಕ್ಕೂ ಮುನ್ನ ಇದ್ದ ಕಾಂಗ್ರೆಸ್ ಸರ್ಕಾರ ಮಾಡಿದ 5 ವರ್ಷದ ದುರಾಡಳಿತ ಇನ್ನೂ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಸರ್ಕಾರದಲ್ಲಿ ಸಾಮಾಜಿಕ ಸಾಮರಸ್ಯ ಇಲ್ಲದೇ ಹಲವಾರು ಕೋಮು ಗಲಭೆಗಳಿಗೆ ಆಸ್ಪದ ಮಾಡಿಕೊಟ್ಟು ನಮ್ಮ ಕಾರ್ಯಕರ್ತರ ಕಗ್ಗೊಲೆಗಳು ಆದವು. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಇಲಾಖೆಗಳನ್ನು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿ ಹಗರಣಗಳ ಸರಮಾಲೆಯನ್ನೇ ನಾವು ನೋಡಿದ್ದೇವೆ. 100% ಭ್ರಷ್ಟಾಚಾರ ಮಾಡಿದ ಉದಾಹರಣೆ ಜನರ ಮುಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸಣ್ಣ ನೀರಾವರಿ ಇಲಾಖೆ ಹಗರಣ, ಒಂದೇ ದಿನದಲ್ಲಿ 36 ಸಾವಿರ ಬೋರ್ವೆಲ್ ಕೊರೆದ ಹಗರಣ, ಹಾಸಿಗೆ-ದಿಂಬು ಖರೀದಿ, ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ, ಕೆಪಿಎಸ್ಸಿ ಪ್ರಾಸಿಕ್ಯೂಟರ್ ನೇಮಕಾತಿ, ಕಾಮಗಾರಿಗಳಲ್ಲಿ ಭ್ರಷ್ಟಾಚಾರ, ದೇಶದ್ರೋಹಿ ಸಂಸ್ಥೆ ಪಿಎಫ್ಐ ವಿರುದ್ಧ ಪ್ರಕರಣಗಳನ್ನು ತೆಗೆದುಹಾಕಿದ್ದು ಕಾಂಗ್ರೆಸ್ ಆಡಳಿತಾವಧಿಯ ಉದಾಹರಣೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಿಜೆಪಿ ಸರ್ಕಾರದಿಂದ ಹಲವು ಸುಧಾರಣೆಗಳು
ನಮ್ಮ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಕಡಿವಾಣ ಹಾಕಲು ಹತ್ತು ಹಲವಾರು ಸುಧಾರಣೆಗಳನ್ನು ತಂದಿದ್ದೇವೆ. ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡದೇ ಫಲಾನುಭವಿಗಳಿಗೆ ಡಿಬಿಟಿ ಮುಖಾಂತರ ಹಣ ತಲುಪಿಸಲಾಗುತ್ತಿದೆ. ಇದರ ಜತೆಯಲ್ಲೇ ರಾಜ್ಯದ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಯುವಕರಿಗೆ ಮತ್ತು ಮಹಿಳೆಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಮಾಡಿಕೊಡಲಾಗಿದೆ. ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕದ ಅನುದಾನ ಎರಡು ಪಟ್ಟು ಮಾಡಿದ್ದೇವೆ. ರಾಜ್ಯಕ್ಕೆ ಉದ್ದಿಮೆಗಳನ್ನು ತರುವುದು, ರಾಜ್ಯದ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಉನ್ನತ ದರ್ಜೆಗೆ ಏರಿಸುವುದೂ ಸೇರಿ ಹಲವಾರು ಪ್ರಗತಿಪರ ಕೆಲಸಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಾಮಾಜಿಕ ನ್ಯಾಯದ ಪರ ಬಿಜೆಪಿ
ಕೋರ್ ಕಮಿಟಿ ಸಭೆಯ ನಿರ್ಣಯದಂತೆ ಸಾಮಾಜಿಕ ನ್ಯಾಯದ ಪರ ಬಿಜೆಪಿ ಎಂದಿಗೂ ಇರುತ್ತದೆ. ಬೇರೆ ಸರ್ಕಾರಗಳು ಮಾಡಲು ಸಾಧ್ಯವಾಗದ ಎಸ್ಸಿಎಸ್ಟಿ ಜನಾಂಗದ ಬಹಳ ವರ್ಷಗಳ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಕಾನೂನಾತ್ಮಕ ಅಂಶಗಳನ್ನು ಗಮನಿಸಿ ಸಕಾರಾತ್ಮಕ ನಿರ್ಣಯ ಮಾಡಿದ್ದೇವೆ. ಆ ವರ್ಗದಲ್ಲಿ ಬರುವ ಇತರರಿಗೂ ನ್ಯಾಯವನ್ನು ಕೊಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ನಾವು ಮಾಡುತ್ತೇವೆ. ಹಲವು ವರ್ಷಗಳ ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸಲು ದಿಟ್ಟ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರುಗಳಾದ ಪ್ರಹ್ಲಾಸ್ ಜೋಷಿ, ಶೋಭಾ ಕರಂದ್ಲಾಜೆ, ನಾರಾಯಣ ಸ್ವಾಮಿ, ಭಗವಂತ್ ಖೂಬಾ ಸೇರಿದಂತೆ ಬಿಜೆಪಿ ಹಿರಿಯ – ಕಿರಿಯ ನಾಯಕರು ಪಾಲ್ಗೊಂಡಿದ್ದರು.