ಬೆಂಗಳೂರು: ಜಮೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡಬೇಕು. ಇಲ್ಲವಾದರೆ ರಾಜೀನಾಮೆ ಕೊಡುವ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೊಪ್ಪು ಹಾಕಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಪ್ರಶ್ನೆಗೆ ಉತ್ತರ ನೀಡಿದರು. ಸುರ್ಜೇವಾಲಾ ಅವರು ಬೇಕಿದ್ರೆ ನೀವು ರಾಜೀನಾಮೆ ಕೊಟ್ಟು ಹೋಗಿ ಎಂದಿದ್ದಾರೆ. ಹಿಂದೆ ಕಾಂಗ್ರೆಸ್ಸಿನಲ್ಲಿ ಮಂಡ್ಯ ಹೊರತುಪಡಿಸಿ ಇತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡುತ್ತಿದ್ದರು. ಈಗ ಎಲ್ಲ ಕಡೆಯಲ್ಲಿ ಅವರಿಗೆ ಕಾಂಗ್ರೆಸ್ ಕೊಕ್ ಕೊಡುತ್ತ ಬಂದಿದೆ ಎಂದು ವಿಶ್ಲೇಷಿಸಿದರು.
ದಾವಣಗೆರೆಯಲ್ಲಿ ಯಾವಾಗಲೂ ಮುಸ್ಲಿಮರಿಗೆ ಕೊಡುತ್ತಿದ್ದರು. ಹೆಚ್ಚು ಜನಸಂಖ್ಯೆಯೂ ಅವರದ್ದಿದೆ. ಮುಸಲ್ಮಾನರು ನಮ್ಮ ಗುಲಾಮರು; ಅವರಿಗೆ ಟಿಕೆಟ್ ಕೊಡದಿದ್ದರೂ ಬಿಜೆಪಿಯನ್ನು ತೋರಿಸಿದರೆ ಸಾಕು, ಬಾಲ ಮುದುರಿಕೊಂಡು ಬಂದು ನಮಗೆ ಮತ ಕೊಡುತ್ತಾರೆಂಬ ಪ್ರವೃತ್ತಿಯನ್ನು ಕಾಂಗ್ರೆಸ್ ಬೆಳೆಸಿಕೊಂಡಿದೆ ಎಂದು ಟೀಕಿಸಿದರು.
ಮುಸಲ್ಮಾನರಲ್ಲೂ ಕೆಲವು ಮುಖಂಡರಿದ್ದಾರೆ. ಅವರು ಕೊನೆಯವರೆಗೆ ಕೇಳಿ ನೋಡುತ್ತಾರೆ. ಆಗಲಿಲ್ಲ ಎಂದರೆ ಬಾಲ ಮುದುರಿಕೊಂಡು ಬಂದು ಬಿದ್ದಿರ್ತಾರೆ ಎಂಬ ಕಾಂಗ್ರೆಸ್ ಅನಿಸಿಕೆಯಂತೆ ಬಾಲ ಮುದುರಿಕೊಂಡು ಹೋಗಿ ಬಿದ್ದಿರ್ತಾರೆ ಎಂದು ತಿಳಿಸಿದರು. ಅದೇ ಕಾರಣದಿಂದ ಕಾಂಗ್ರೆಸ್ ಮಾಡುವುದೂ ಸರಿ ಇದೆ; ಇವರು ಮಾಡುವುದೂ ಹಾಗೇ ಇದೆ ಎಂದರು.
ಬಿಜೆಪಿ ಬಗ್ಗೆ ಅವರಿಗೆ ಬೇಸರ ಇರಬಹುದು. ನಾವು ಮುಸಲ್ಮಾನರ ವಿರೋಧಿಗಳಲ್ಲ; ಕಾಂಗ್ರೆಸ್ ಅವರ ತಲೆಯಲ್ಲಿ ಬಿಟ್ಟ ಹುಳಗಳು ಇನ್ನೂ ಸತ್ತಿಲ್ಲ ಎಂದ ಅವರು, ಅವರು ನಮಗೆ ಮತ ಕೊಡುವುದು ಬೇಕಿಲ್ಲ. ಅದು ಅವರಿಗೆ ಬಿಟ್ಟ ವಿಷಯ. ನಾವು ಇಡೀ ದೇಶದಲ್ಲಿ ಅಧಿಕಾರದಲ್ಲಿದ್ದೇವೆ. ದೇಶವನ್ನಾಳುವ ಮೋದಿಜೀ ಅವರು ದೊಡ್ಡ ಸಮುದಾಯದವರಲ್ಲ; ಅವರು ಕೂಡ ಹಿಂದುಳಿದವರೇ. ಯಾವ ರೀತಿ ಸಿದ್ದರಾಮಯ್ಯನವರು ನಾನು ಅಹಿಂದ ಎಂದು ಅಂದುಕೊಳ್ಳುತ್ತಾರೋ ಅದೇರೀತಿ ಮೋದಿಜೀ ಅವರು ಅಹಿಂದವೇ ಎಂದು ವಿವರಿಸಿದರು.
ಕಾಂಗ್ರೆಸ್ಸಿಗೆ ಸವಾಲು ಹಾಕಿ ನಾಮಪತ್ರ
ಇವರಾಗಿಯೇ ತಿಳಿದುಕೊಂಡು ಕಾಂಗ್ರೆಸ್ಸಿಗೆ ಜೋತುಬಿದ್ದು, ತಮ್ಮ ಸ್ವಾಭಿಮಾನವನ್ನು ಹಾಳು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ಮೂರು ಕಾಸಿನ ಮರ್ಯಾದೆಯನ್ನೂ ಮಲ್ಲಿಕಾರ್ಜುನ್ ಅವರ ಕುಟುಂಬ ಕೊಟ್ಟಿಲ್ಲ. ಅವರು ಸಚಿವರು; ಅವರ ಪತ್ನಿ ಸಂಸದೆ. ಮಗನಿಗೆ ಒಂದು ಅವಕಾಶ ಕೊಡಿಸಬೇಕು. ನೀವು ಟಿಕೆಟ್ ಕೊಡದಿದ್ದರೂ ಕೇರ್ ಮಾಡುವುದಿಲ್ಲ. ಕಾಂಗ್ರೆಸ್ಸಿಗೆ ಸವಾಲು ಹಾಕಿ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಈಗ ಕಾಂಗ್ರೆಸ್ ಅನಿವಾರ್ಯವಾಗಿ ಅವರಿಗೆ ಟಿಕೆಟ್ ಕೊಡಬೇಕಾಗಬಹುದು ಎಂದರು.
ಅಕ್ರಮಕ್ಕಾಗಿಯೇ ಮತಪತ್ರಕ್ಕೆ ಕೋರಿಕೆ
ಜಿಬಿಎ ಚುನಾವಣೆ ಬರಲಿದೆ ಎಂದುಕೊಂಡಿದ್ದೇವೆ. ಜಿಬಿಎ ಚುನಾವಣೆಯಲ್ಲಿ ಮತಪತ್ರದೊಂದಿಗೆ ಚುನಾವಣೆ ನಡೆಸಲು ನಿರ್ಧರಿಸಿದ್ದಾರೆ. ಕುಣಿಗಲ್‍ನ ಸಂತೆಮಾದನೂರಿನಲ್ಲಿ ಒಂದು ಸೊಸೈಟಿ ಚುನಾವಣೆ ನಡೆದಿದೆ. ಅಧಿಕಾರಿ ಹೊರಗಡೆ ಕುಳಿತು ಮತ ಒತ್ತಿ ಬಂಡಲ್ ಅನ್ನು ತಂದು ಡಬ್ಬಕ್ಕೆ ಹಾಕುವಾಗ ಸಿಕ್ಕಿ ಹಾಕಿಕೊಂಡಿದ್ದಾರೆ. ನಮ್ಮ ಪಕ್ಷದ ಏಜೆಂಟ್ ಅವನನ್ನು ಹಿಡಿದಿದ್ದಾರೆ. ಪೊಲೀಸರು ಬಂದು ಅಧಿಕಾರಿ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆ. ವಿಡಿಯೋ ಇದ್ದರೂ ಎಫ್‍ಐಆರ್ ಮಾಡಿ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಹಿಡಿದುಕೊಟ್ಟಾತ ಅಧಿಕಾರಿಯನ್ನು ಹೊಡೆದುದಾಗಿ ಎಫ್‍ಐಆರ್ ಮಾಡಿದ್ದಾರೆ. ಇದನ್ನು ಬಯಲಿಗೆ ತಂದವರ ವಿರುದ್ಧ ಪೊಲೀಸರು ಕೇಸ್ ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಈ ರೀತಿ ಅಕ್ರಮ ಮಾಡುವುದರಲ್ಲಿ ಅವರು ಮೊದಲಿನಿಂದಲೂ ಇದ್ದಾರೆ. ಇದರಲ್ಲಿ ಒಳಗಾದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಹಿಡಿದುಕೊಟ್ಟವರ ಮೇಲಿನ ಎಫ್‍ಐಆರ್ ರದ್ದು ಮಾಡಬೇಕೆಂದು ಆಗ್ರಹಿಸಿದರು. ಕುಣಿಗಲ್‍ನ ಘಟನೆ ನಿಮ್ಮ ಮುಖಕ್ಕೆ ಹಿಡಿದ ಕನ್ನಡಿ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಶೇ.20ರಷ್ಟು ಹೆಚ್ಚುವರಿ ಸಿಲಿಂಡರ್ ಪೂರೈಕೆಗೆ ನಿರ್ಧಾರ
ಹೋಟೆಲ್ ಮಾಲೀಕರಿಗೆ ಸಿಹಿ ಸುದ್ದಿ: ಶೇ.20ರಷ್ಟು ವಾಣಿಜ್ಯ ಬಳಕೆಯ LPG ಕೋಟಾ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮತಿ








