ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರನ್ನು ಗುರಿಯಾಗಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ( Revenue Minister R Ashok ) ಅವರು ಆರೋಪಿಸಿದರು. ಮುಖ್ಯಮಂತ್ರಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮತಿ ಇಂದಿರಾ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಪ್ರಭಾವಶಾಲಿ ಎನಿಸಿದ್ದ ಮುದ್ರಣ ಮಾಧ್ಯಮವನ್ನು ಗುರಿಯಾಗಿ ಇಟ್ಟುಕೊಂಡಿದ್ದರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇಡೀ ಪತ್ರಕರ್ತರನ್ನು ಜೈಲಿಗೆ ಅಟ್ಟಿದ ಕಳಂಕ ಕಾಂಗ್ರೆಸ್ ಮೇಲಿದೆ. ಇವತ್ತು ಅದೇ ಧಾಟಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಹೊರಟಿರುವುದು ಹೇಡಿತನದ ಪರಮಾವಧಿ ಎಂದು ಟೀಕಿಸಿದರು.
Job Alert: ಸಮುದಾಯ ಆರೋಗ್ಯ ಅಧಿಕಾರಿ(CHO) ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 30 ಸಾವಿರ ವೇತನ
ಇದು ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಕಾಂಗ್ರೆಸ್ನ ಸಂಚು ಎಂದು ಆಕ್ಷೇಪಿಸಿದ ಅವರು, ಒಂದು ರೀತಿ ಬ್ಲ್ಯಾಕ್ಮೈಲ್ ನಡೆದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಅವರ ಉತ್ತಮ ಕಾರ್ಯಕ್ಕಾಗಿ ರಷ್ಯಾವೂ ಹೊಗಳಿದೆ. ಪಾಕಿಸ್ತಾನ, ಚೀನಾಗೆ ಸರಿಯಾದ ಬುದ್ಧಿ ಕಲಿಸಿ ವಿಶ್ವ ನಾಯಕರಾಗಿದ್ದಾರೆ. ಅಮೆರಿಕದ ಪ್ರಧಾನಿಯೂ ಹೊಗಳಿದ್ದಾರೆ. ಇಂಗ್ಲೆಂಡ್ ಪ್ರಧಾನಿಯೂ ಉತ್ತಮ ಬಾಂಧವ್ಯ ಹೊಂದುವುದಾಗಿ ತಿಳಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಮೋದಿಯವರ ಕಾರ್ಯಕ್ರಮಗಳು ದಿನನಿತ್ಯ ಹೆಚ್ಚಾಗಿ ಪ್ರಸಾರ ಆಗುತ್ತಿರುವ ಕೊರಗು ಕೂಡ ಇದಕ್ಕೆ ಕಾರಣ ಎಂದು ತಿಳಿಸಿದರು.
ಮಾಧ್ಯಮವನ್ನೂ ಒಡೆದ ಕಾಂಗ್ರೆಸ್
ಮುಸ್ಲಿಂ ಪತ್ರಕರ್ತರಿಗೆ ಮಾತ್ರ ಲ್ಯಾಪ್ ಟಾಪ್ ಗಿಫ್ಟ್ ಕೊಡಬೇಕೆಂದು ಸರಕಾರದ ಆದೇಶ ಹೊರಡಿಸಿದ್ದರು. ಕಾಂಗ್ರೆಸ್ನವರ ಕಣ್ಣಿಗೆ, ದಿವ್ಯದೃಷ್ಟಿಗೆ ಬೇರೆ ಪತ್ರಕರ್ತರು ಕಾಣಲಿಲ್ಲವೇ? ಲಿಂಗಾಯತ- ವೀರಶೈವರನ್ನು ಒಡೆಯಲು ಮುಂದಾಗಿದ್ದ ಸಿದ್ದರಾಮಯ್ಯರವರು ಪತ್ರಕರ್ತರಲ್ಲೂ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಎಂದು ಭೇದಭಾವ ತೋರಿಸುವ ಮೂಲಕ ಪತ್ರಕರ್ತರನ್ನು ದಾಳವಾಗಿ ಮಾಡಿದ್ದರು ಎಂದು ಅಶೋಕ್ ಅವರು ಟೀಕಿಸಿದರು.
ಸಿದ್ದರಾಮಯ್ಯರಿಗೆ ಒಡೆಯುವ ಅಂಟು ಬಂದಿದೆ. ಕಾಂಗ್ರೆಸ್ನವರು ಒಡೆದು ಆಳುವ ನೀತಿಯನ್ನು ಪತ್ರಕರ್ತರ ಮೇಲೆ ಪ್ರಯೋಗ ಮಾಡಿದ್ದರು. ಇದೊಂದು ಹೀನ ಕಾರ್ಯ ಎಂದು ಆಕ್ಷೇಪಿಸಿದರು. ಉರ್ದು ಪತ್ರಿಕೆಗೆ ಮಾತ್ರ 61 ಲಕ್ಷದ ಜಾಹೀರಾತು ಕೊಡಲು ಸೂಚಿಸಿದ್ದರು ಎಂದು ಆದೇಶಪತ್ರವನ್ನು ನೀಡಿದರು.
ಮಾಧ್ಯಮವನ್ನು ಒಡೆಯುವ ಪ್ರಯತ್ನ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿಗರಿಗೆ ರಕ್ತಗತವಾಗಿದೆ. ಐ ಫೋನ್ ಲಂಚ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಲಂಚ ಕೊಡುವ ಪ್ರವೃತ್ತಿ ಬಿಡುವಂತೆ ಆಗ ಕುಮಾರಸ್ವಾಮಿ ಅವರು ಸಲಹೆ ನೀಡಿದ್ದರು ಎಂದು ವಿವರ ನೀಡಿದರು.
ಕಾಂಗ್ರೆಸ್ನ 2 ಜಿ ಹಗರಣ, ಹೆಲಿಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣಗಳಿಂದ ಹಲವರು ಜೈಲಿನಲ್ಲಿದ್ದಾರೆ. ಉಳಿದವರು ಜಾಮೀನಿನಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ- ರಾಹುಲ್ ಗಾಂಧಿ ಅವರು ಕೂಡ ಹಗರಣದಲ್ಲಿ ಭಾಗಿಯಾಗಿ ಜಾಮೀನಿನಡಿ ಹೊರಗಿದ್ದಾರೆ. ಭ್ರಷ್ಟಾಚಾರ, ಕೋಮುವಾದ ಮತ್ತು ಗೂಂಡಾಗಿರಿಗೆ ಒಂದು ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ವಿವರಿಸಿದರು.
ಮೊಬೈಲ್ ಕಳೆದೋದ್ರೆ ಡೋಂಟ್ ವರಿ: ಇಲ್ಲಿದೆ ನೋಡಿ ಪರಿಹಾರ | Mobile Theft Alert
ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ನಲ್ಲಿ 65 ಕೋಟಿ ಲೂಟಿ ಮಾಡಲು ಟೆಂಡರ್ ಮಾಡಿದ್ದರು. ಜನರ ಹೋರಾಟದ ಪರಿಣಾಮವಾಗಿ ರಾತ್ರೋರಾತ್ರಿ ಅದನ್ನು ವಾಪಸ್ ಪಡೆದರು. ಇವರು ಸತ್ಯ ಹರಿಶ್ಚಂದ್ರರಾಗಿದ್ದರೆ, ಭ್ರಷ್ಟಾಚಾರ ಇಲ್ಲದಿದ್ದರೆ ಆ ಯೋಜನೆಯನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಚಾತಕಪಕ್ಷಿಯಂತೆ ಹವಣಿಸುತ್ತಿದೆ. ಕರ್ನಾಟಕವನ್ನು ದೆಹಲಿಯ ನಾಯಕರಿಗೆ ಎಟಿಎಂ ಮಾಡಲು ಮತ್ತು ವೈಯಕ್ತಿಕವಾಗಿ ಜೇಬು ತುಂಬಿಸಲು ಇಲ್ಲಿ ಅಧಿಕಾರ ಪಡೆಯುವ ಹವಣಿಕೆ ಕಾಂಗ್ರೆಸ್ಸಿಗರದು. ಕರ್ನಾಟಕದ ಮೇಲೆ ಕಾಂಗ್ರೆಸ್ಸಿಗರ ವಕ್ರದೃಷ್ಟಿ ಬಿದ್ದಿದೆ. ಸಿಎಂ ಕಚೇರಿಯಿಂದ ಹಣ ಕೊಟ್ಟ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಟ್ಟಿದ್ದು ತನಿಖೆ ನಡೆದಿದೆ. ಸತ್ಯಾಸತ್ಯತೆ ಹೊರಕ್ಕೆ ಬರುವ ಮೊದಲೇ ಕಾಂಗ್ರೆಸ್ಸಿಗರು ನ್ಯಾಯಾಧೀಶರಾಗಿ ಪತ್ರಕರ್ತರ ವಿರುದ್ಧ ತೀರ್ಪು ನೀಡಿದ್ದಾರೆ ಎಂದರು.
BIG NEWS: ‘ಸಚಿವ ಶ್ರೀರಾಮುಲು’ಗೆ ‘ಮೊಳಕಾಲ್ಮೂರು ಕ್ಷೇತ್ರ’ದಲ್ಲಿ ಸೋಲಿನ ಭೀತಿ: ‘ಹೊಸ ಕ್ಷೇತ್ರ’ಕ್ಕೆ ಹುಡುಕಾಟ?
ಕಾಂಗ್ರೆಸ್ ಪಕ್ಷದ ತೀರ್ಪು ಎಷ್ಟು ಸರಿ? ಎಂದು ಕೇಳಿದರು. ಕಾಂಗ್ರೆಸ್ ಮುಖಂಡರು ಪತ್ರಕರ್ತರ ಮತ್ತು ಜನರ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು. ಪತ್ರಕರ್ತರ ವಿರುದ್ಧ ಕಳಂಕ ತಂದ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು ಎಂದರು.
ಮಾಧ್ಯಮದವರಿಗೆ ಇರುಸು ಮುರುಸುಂಟು ಮಾಡುವ ಕೆಲಸ- ಸುಧಾಕರ್
ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ|| ಕೆ. ಸುಧಾಕರ್ ಅವರು ಮಾತನಾಡಿ, ಇವತ್ತು ಕೆಪಿಸಿಸಿ ಅಧ್ಯಕ್ಷರು ಮತ್ತು ಸಿಎಲ್ಪಿ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎರಡು ವಿಷಯಗಳ ಕುರಿತು ಆಪಾದನೆ ಮಾಡಿದ್ದಾರೆ. ದೀಪಾವಳಿ ಹಬ್ಬದ ಉಡುಗೊರೆ ಕುರಿತು ಉಲ್ಲೇಖಿಸಿ ಸಿಎಂ ಅವರನ್ನು ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಮಾಧ್ಯಮದವರ ವೃತ್ತಿ ಬದುಕಿಗೆ ಇರುಸು ಮುರುಸುಂಟು ಮಾಡುವ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.
ಹಬ್ಬದ ವೇಳೆ ಉಡುಗೊರೆ ಕೊಡುವುದು, ಸಿಹಿ ಹಂಚುವುದು ಹಿಂದೂ ಧರ್ಮದ ಪರಂಪರೆ ಮತ್ತು ಇತಿಹಾಸ. ಇವರಿಗೆ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ಇಷ್ಟು ದ್ವೇಷ ಯಾಕೆ? ಹಣ ಕೊಟ್ಟದ್ದು ನಿಜವೇ ಆಗಿದ್ದರೆ ಇವರಿಗೆ ದೂರು ಕೊಟ್ಟವರು ಯಾರೆಂದು ಹೇಳಲಿ. ಸಾಕ್ಷಿ ಇಲ್ಲದೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉಡುಗೊರೆ ಕೊಡುವುದು ತಪ್ಪಾದರೆ ಪಡೆಯುವುದೂ ತಪ್ಪಲ್ಲವೇ? ಕಾಂಗ್ರೆಸ್ನವರು ತಮ್ಮ ಅಧಿಕಾರದ ಅವಧಿಯಲ್ಲಿ ಉಡುಗೊರೆ ಕೊಟ್ಟದ್ದಲ್ಲದೇ ಉಡುಗೊರೆ ಪಡೆದಿದ್ದರು. ಅದು ಜಗಜ್ಜಾಹೀರಾಗಿದೆ. ಇಂಥ ವಿಷಯಗಳಲ್ಲಿ ಕ್ಷುಲ್ಲಕ ರಾಜಕೀಯ ಯಾಕೆ? ಕಾಂಗ್ರೆಸ್ಸಿಗರಿಗೆ ನಮ್ಮ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ಅಹಿಂದ ಸಮುದಾಯದಲ್ಲಿ ಅತ್ಯಂತ ಎತ್ತರದ ನಾಯಕರಾಗಿ ನಮ್ಮ ಪ್ರಧಾನಿ ಮೋದಿಜಿ ಅವರು ಇದ್ದಾರೆ. ಕಲ್ಬುರ್ಗಿಯ ಒಬಿಸಿ ಸಮಾವೇಶ ಲಕ್ಷಾಂತರ ಜನ ಸೇರಿ ಅತ್ಯಂತ ಯಶಸ್ವಿ ಎನಿಸಿದೆ. ಹಾಗಾಗಿ ಅದನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದರು.
ನಿಮಗ್ಯಾವ ನೈತಿಕತೆ ಇದೆ -ಡಾ|| ಕೆ. ಸುಧಾಕರ್
ಅಂತ್ಯೋದಯ ವರ್ಗಗಳು, ದಯನೀಯ ಸ್ಥಿತಿಯಲ್ಲಿರುವವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಮೋದಿಜಿ ಕೊಟ್ಟಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯ ಸರಕಾರವೂ ಕಾರ್ಯ ನಿರ್ವಹಿಸುತ್ತಿದೆ. ಆದರೆ, ನಿಮ್ಮದೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕೃತವಾಗಿ ಕಿಯೋನಿಕ್ಸ್ ಮೂಲಕ ತಮ್ಮ ಕ್ಷೇತ್ರದ 40 ಜನರಿಗೆ ಉಡುಗೊರೆ ಕೊಟ್ಟಿದ್ದರು. ಚುನಾವಣೆಗೆ ಮೊದಲು 40 ಲ್ಯಾಪ್ ಟಾಪ್ ಗಳನ್ನು 14.09 ಲಕ್ಷದಲ್ಲಿ ವಿತರಿಸಲಾಗಿತ್ತು. ಹೀಗಿದ್ದಾಗ ನಿಮಗ್ಯಾವ ನೈತಿಕತೆ ಇದೆ ಎಂದು ಡಾ|| ಕೆ. ಸುಧಾಕರ್ ಪ್ರಶ್ನಿಸಿದರು.
ನಂದೀಶ್ ಅವರ ಸಾವು ಸರಕಾರದಿಂದಾದ ಕೊಲೆ ಎಂದು ಪ್ರಸ್ತಾಪ ಮಾಡಿದ್ದಾರೆ. ನಮಗೆ ತಿಳಿದಂತೆ ಅದು ಸಹಜ ಸಾವು. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ನಿಮ್ಮ ಕಾಲದಲ್ಲಿ ಎಷ್ಟು ಇಂಥ ಸಮಸ್ಯೆಗಳಾಗಿವೆ ಎಂದು ಪ್ರಶ್ನಿಸಿದರು. ಗಣಪತಿ ಆತ್ಮಹತ್ಯೆ ಮಾಡಿಕೊಂಡರು; ಡಿವೈಎಸ್ಪಿ ಸ್ವಯಂ ನಿವೃತ್ತಿ ಪಡೆಯುವ ಪರಿಸ್ಥಿತಿ ತಂದಿಟ್ಟಿದ್ದೀರಲ್ಲವೇ? ಅನುಪಮಾ ಶೆಣೈ ಆರೋಪಕ್ಕೆ ಸಚಿವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಾ ಎಂದು ಕೇಳಿದರು.
ಕಲ್ಲಪ್ಪ ಬಸಪ್ಪ ಹಂಡಿಭಾಗ್ ಸಾವಾಯಿತು. ಸಚಿವರ ವಿರುದ್ಧ ಆಪಾದನೆ ಮಾಡಿ ಇಷ್ಟೆಲ್ಲ ಪ್ರಕರಣ ನಡೆದರೂ ನೀವೇನು ಮಾಡಿದ್ದೀರಿ ಎಂದರು. ನಂದೀಶ್ ಅವರ ಕುಟುಂಬದವರು ಸರಕಾರದ ಮೇಲೆ ಆರೋಪ ಮಾಡಿ ಹೇಳಿಕೆ ಕೊಟ್ಟಿಲ್ಲ. ನೀವು ರಾಜಕೀಯದ ಬಣ್ಣ ಬೆರೆಸುತ್ತಿದ್ದೀರಿ ಎಂದು ಆಕ್ಷೇಪ ಸೂಚಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ಘೋಷಣೆ, 438 ನಮ್ಮ ಕ್ಲಿನಿಕ್, ಕಂದಾಯ ಇಲಾಖೆಯ ಉತ್ತಮ ಕಾರ್ಯಗಳು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲವೇ? ಇದು ರಾಜಕೀಯವಲ್ಲದೆ ಮತ್ತೇನಲ್ಲ ಎಂದರು. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಬೆಣ್ಣೆ ಹಚ್ಚುತ್ತ ಬಂದಿತ್ತು. ಆದರೆ, ನಮ್ಮ ಸರಕಾರ ಮೀಸಲಾತಿ ಪ್ರಮಾಣ ಹೆಚ್ಚಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡಿದೆ ಎಂದು ತಿಳಿಸಿದರು.
ನಮ್ಮ ಸರಕಾರದ ಜನಪ್ರಿಯತೆ ತಡೆದುಕೊಳ್ಳಲು ಕಾಂಗ್ರೆಸ್ ನವರಿಗೆ ಸಾಧ್ಯವಾಗುತ್ತಿಲ್ಲ. ಮಾಧ್ಯಮದವರನ್ನು ಲಘುವಾಗಿ ಮಾತನಾಡಿದ್ದನ್ನು ಖಂಡಿಸುತ್ತೇನೆ. ಇಲ್ಲಿನ ಪತ್ರಕರ್ತರು ದೇಶದಲ್ಲಿ ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. ಅದನ್ನು ಹಾಳು ಮಾಡದಿರಿ ಎಂದು ಒತ್ತಾಯಿಸಿದರು.