ಬೆಂಗಳೂರು : ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಮಪತ್ರ ಸಲ್ಲಿಕೆಗೊ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಪಿ ಯೋಗೇಶ್ವರ್ ಅವರು, ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಅಂತ ಗೊತ್ತಿತ್ತು. ಪ್ರಾಮಾಣಿಕ ಪ್ರಯತ್ನ ಮಾಡಿದರು ಕೂಡ ಟಿಕೆಟ್ ಸಿಗಲಿಲ್ಲ. ನಾನು ಕಾಂಗ್ರೆಸ್ ಹಳೆಯ ಸದಸ್ಯ. ಮೊದಲೇ ಟಿಕೆಟ್ ಕೊಟ್ಟಿದ್ದರೆ ನಾನು ಯಾಕೆ ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದೆ? ಟಿಕೆಟ್ ಕೊಟ್ಟಿದ್ದರೆ ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದೆ. ಕೊನೆಯ ತನಕ ಕೂಡ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ ಆದರೆ ಟಿಕೆಟ್ ಸಿಗಲಿಲ್ಲ ಎಂದು ತಿಳಿಸಿದರು.
ನಿನ್ನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಪಕ್ಷದ ಬಾವುಟ ನೀಡಿ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಹಾಗಾಗಿ ನಾಳೆ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಇಂದು ಬೆಳಿಗ್ಗೆ 11 ಗಂಟೆಗೆ ಚನ್ನಪಟ್ಟಣ ತಾಲೂಕು ಕಚೇರಿಗೆ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.ಸಿಪಿ ಯೋಗೇಶ್ವರ್ ಅವರಿಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್ ಸೇರಿದಂತೆ ಸೇರಿದಂತೆ ಹಲವು ಸಚಿವರು, ಜಿಲ್ಲೆಯ ಶಾಸಕರು ಸಾಥ್ ನೀಡಲಿದ್ದಾರೆ.