ಬೆಂಗಳೂರು: ಕಾಂಗ್ರೆಸ್ ಪಕ್ಷದ 5 ವರ್ಷಗಳ ಆಡಳಿತದ ಅವಧಿಯಲ್ಲಿ ರಾಜ್ಯದ ಸ್ಥಿತಿಗೆ ಅಧೋಗತಿಗೆ ತಲುಪಿತ್ತು. ಆದರೆ, ಬಿಜೆಪಿ ಸರಕಾರವು ಕೋವಿಡ್ ಸಂಕಷ್ಟದ ನಡುವೆಯೂ ಗರಿಷ್ಠ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಈ ಭಾಗಕ್ಕೆ 1,500 ಕೋಟಿ ನೀಡಿ ಅದರಡಿ ಕಾಮಗಾರಿ ನಡೆಸಿದರು. ಈ ವರ್ಷ ನಾನು 3 ಸಾವಿರ ಕೋಟಿಯ ಕ್ರಿಯಾಯೋಜನೆ ಮಾಡಿಸಿದ್ದೇನೆ. 2 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. 51 ಪಿಎಚ್ಸಿ ಕೇಂದ್ರ ನಿರ್ಮಿಸಲಾಗುವುದು. ಅಪ್ಪರ್ ಕೃಷ್ಣ ಯೋಜನೆಯಡಿ 5 ಸಾವಿರ ಕೋಟಿಗಿಂತ ಹೆಚ್ಚು ಅನುದಾನ ನೀಡುತ್ತೇವೆ ಎಂದರು.
ಅಪ್ಪರ್ ಕೃಷ್ಣದಡಿ ಹೆಚ್ಚುವರಿ ನೀರು ಲಭಿಸುವ ವಿಶ್ವಾಸ ಇದೆ. ಈ ಭಾಗದ ಯೋಜನೆಗಳು ಈಡೇರಿಸುವ ಸಂಕಲ್ಪ ನಮ್ಮದು. 5 ಸಾವಿರ ಕೋಟಿ ಅದಕ್ಕಾಗಿ ವಿನಿಯೋಗ ಮಾಡಲಾಗುವುದು. ಮಲ್ಲಾಬಾದ್ ಏತ ನೀರಾವರಿ ಯಾರು ಮಾಡಿದವರು ಸ್ವಾಮಿ? ಹೈಕ ಮತದಿಂದ ಗೆದ್ದು ಅಧಿಕಾರ ಪಡೆದ ಕಾಂಗ್ರೆಸ್ ನವರು ಕಲ್ಯಾಣ ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಈ ಭಾಗದ ಜನರ ನಂಬಿಕೆ, ವಿಶ್ವಾಸ ಇಟ್ಟರೂ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಯಿತು. ಕಾಂಗ್ರೆಸ್ ಆಡಳಿತÀದಲ್ಲಿ ನಂಜುಂಡಪ್ಪ ವರದಿ ದೂಳು ಹಿಡಿದಿತ್ತು. ಅದನ್ನು ಕಸದ ಬುಟ್ಟಿಗೆ ಹಾಕಿದ್ದರು ಎಂದು ಟೀಕಿಸಿದರು.
371 ಜೆ ಬಂದರೂ ಅಭಿವೃದ್ಧಿಯು ಕೇವಲ ಕಾಗದದಲ್ಲೇ ಉಳಿಯಿತು. ಜನ ಮುಗ್ಧರಿದ್ದಾರೆ; ಅವರು ಮತಬ್ಯಾಂಕ್ ಎಂದು ಕಾಂಗ್ರೆಸ್ ಭಾವಿಸಿತ್ತು. ಈಗ ಜನರು ಬುದ್ಧಿವಂತರಾಗಿದ್ದಾರೆ. ಇನ್ನು ಮುಂದೆ ಈ ಭಾಗದ ಜನತೆಗೆ ಕಾಂಗ್ರೆಸ್ನವರು ವಿಶ್ವಾಸದ್ರೋಹ ಮಾಡಲು ಅಸಾಧ್ಯ ಎಂದರು.
ಬಿಜೆಪಿ ಈ ಭಾಗದ ಅಭಿವೃದ್ಧಿಗೆ ಬದ್ಧವಾಗಿದೆ. ಕಾಂಗ್ರೆಸ್ ಸರಕಾರವು ಈ ಭಾಗದ ಅಭಿವೃದ್ಧಿಗೆ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಳಿದರು. ಯಾದಗಿರಿಗೆ ಮೆಡಿಕಲ್ ಕಾಲೇಜು ನೀಡಲಿದ್ದೇವೆ. ಕಾಂಗ್ರೆಸ್ ಸರಕಾರ ಯಾಕೆ ಮಾಡಿಲ್ಲ? ಇಚ್ಛಾಶಕ್ತಿ ಇರದುದು ಕಾರಣವಲ್ಲವೇ ಎಂದು ಪ್ರಶ್ನಿಸಿದರು.
ಈ ಭಾಗದ ಜನರ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ, ಅದು ಋಣ ತೀರಿಸಲಿಲ್ಲ. ಬಿಜೆಪಿ ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಕಾಂಗ್ರೆಸ್ ಪಕ್ಷದವರ ಸಾಮಾಜಿಕ ನ್ಯಾಯ ಕೇವಲ ಭಾಷಣದಲ್ಲಿತ್ತು. ದಲಿತರು, ಹಿಂದುಳಿದವರ ಕಡೆ ತಿರುಗಿ ನೋಡಲು ಅವರಿಗೆ ಪುರುಸೊತ್ತು ಸಿಗಲಿಲ್ಲ. ಮೀಸಲಾತಿ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ, ಮೀಸಲಾತಿ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಿದೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ವಿವರಿಸಿದರು. ದುಡಿಯುವ ವರ್ಗಕ್ಕೆ ಹೆಚ್ಚಿನ ಅವಕಾಶ ನೀಡಲು ಮತ್ತು ಸ್ವಾವಲಂಬಿ- ಸ್ವಾಭಿಮಾನದ ಜೀವನ ಸಾಗಿಸಲು ಈ ತೀರ್ಮಾನ ಎಂದರು. ಸಾಮಾಜಿಕ ನ್ಯಾಯ ನಮ್ಮ ಧ್ಯೇಯ- ಬದ್ಧತೆ ಎಂದು ತಿಳಿಸಿದರು.
ದೇಶ- ನಾಡಿನ ನಿರ್ಮಾಣಕ್ಕೆ ಶ್ರಮಿಕರ ಕೊಡುಗೆಯೂ ಬೇಕು ಎಂದು ಅವರು ತಿಳಿಸಿದರು. ಕಾಂಗ್ರೆಸ್ ಶಾಸಕರು ಅಭಿವೃದ್ಧಿಯ ಹಣವನ್ನು ನುಂಗಿಹಾಕಿದರು. ಚಾದರ, ದಿಂಬಿನಲ್ಲೂ ಹಣ ನುಂಗಿ ಹಾಕಿದ್ದರು. ಬೆಂಗಳೂರು ನೆಲ, ನೀರಾವರಿ, ಬಂಧುಗಳಿಗೆ ನೌಕರಿ, ಪೊಲೀಸರಿಗೆ ನೌಕರಿ ವಿಷಯದಲ್ಲೂ ಭ್ರಷ್ಟಾಚಾರ ನಡೆಸಿದ್ದರು ಎಂದು ವಿವರಿಸಿದರು.
ಕಾಗಿನೆಲೆ ಅಭಿವೃದ್ಧಿ ಮಾಡಿದ್ದೇವೆ. ಎಸ್ಟಿ ಸಮುದಾಯಕ್ಕೆ ನಿಗಮ ಮಾಡಿದ್ದೇವೆ. ವಾಲ್ಮೀಕಿ ಜಯಂತಿ ಆಚರಣೆಗೆ ಸೂಚಿಸಿದ್ದೇವೆ. ನಮ್ಮದು ಮಾತಿನಂತೆ ಕೃತಿಯ ಸರಕಾರ. ಕಾಂಗ್ರೆಸ್ನಂತೆ ಕೇವಲ ಮಾತಿನ ಸರಕಾರ ನಮ್ಮದಲ್ಲ ಎಂದು ನುಡಿದರು.
ಕೇಂದ್ರ- ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಗಳು, ಜನಪರ ಕಾರ್ಯಕ್ರಮಗಳನ್ನು ಗಮನಿಸಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು. ರೈತ ವಿದ್ಯಾನಿಧಿ ಆರಂಭಿಸಿದ್ದನ್ನು ವಿವರಿಸಿದ ಅವರು, ರೈತ ಕೂಲಿಕಾರರು, ನೇಕಾರರು, ಮೀನುಗಾರರ ಜನಾಂಗಕ್ಕೂ ಇದನ್ನು ವಿಸ್ತರಿಸಲಾಗಿದೆ ಎಂದರು.
ಎಸ್ಸಿ, ಎಸ್ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡಲಾಗುತ್ತಿದೆ. ಜಮೀನು ಕೊಳ್ಳಲು ಹಣವನ್ನು ಹೆಚ್ಚಿಸಿದ್ದೇವೆ. 100 ಅಂಬೇಡ್ಕರ್ ಹಾಸ್ಟೆಲ್, 50 ಕನಕದಾಸ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದೇವೆ ಎಂದು ವಿವರಿಸಿದರು. ರಾಯಚೂರಿಗೆ ಏರ್ಪೋರ್ಟ್ ಸೇರಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದರು.
ರಾಹುಲ್ ಗಾಂಧಿಗೆ ದೇಶವೂ ಗೊತ್ತಿಲ್ಲ; ಕರ್ನಾಟಕವೂ ಗೊತ್ತಿಲ್ಲ. ಸಿದ್ರಾಮಣ್ಣನವರು ಮಾಡಿದ ಭ್ರಷ್ಟಾಚಾರದ ವಿವರವನ್ನು ರಾಹುಲ್ ಗಾಂಧಿಗೆ ಕಳುಹಿಸುವುದಾಗಿ ಹೇಳಿದ್ದೇನೆ. ರಾಹುಲ್ ಅವರು ಪ್ರಧಾನಿಯಲ್ಲ ಎಂದು ನನಗೆ ಗೊತ್ತಿದೆ. ಸಿದ್ರಾಮಣ್ಣನ ಆಡಳಿತಾವಧಿಯ ಅವ್ಯವಹಾರಗಳ ತನಿಖೆ ನಡೆದಿದೆ. ರಾಹುಲ್ ಗಾಂಧಿ ಇವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೋ ಎಂದು ಕೇಳುತ್ತೇವೆ. ದಾಖಲೆ ಕೊಟ್ಟು ಅವರ ಮೇಲೆ ಕ್ರಮಕ್ಕೆ ಕೋರಲಿದ್ದೇವೆ ಎಂದರು.
ನಾವು ಕುಂಡದ ಗಿಡಗಳಲ್ಲ; ನಾವೂ ಕರ್ನಾಟಕದ ಭೂಮಿಯಲ್ಲಿ ಹೆಮ್ಮರವಾಗಿ ಬೆಳೆದವರು ನಾವು. ಕಾಂಗ್ರೆಸ್ ಸುಳ್ಳನ್ನು ಜನರು ನಂಬುವುದಿಲ್ಲ. ಸ್ವಚ್ಛ- ದಕ್ಷ ಆಡಳಿತ, ಎಲ್ಲ ವರ್ಗಕ್ಕೆ, ಎಲ್ಲ ಪ್ರದೇಶಕ್ಕೂ ನ್ಯಾಯ ಒದಗಿಸಲು ಬಿಜೆಪಿಯನ್ನು ಗೆಲ್ಲಿಸಲು ಸಂಕಲ್ಪ ಮಾಡಿ ಎಂದು ಮನವಿ ಮಾಡಿದರು. ನವ ಕರ್ನಾಟಕದಿಂದ ನವ ಭಾರತ ನಿರ್ಮಿಸೋಣ ಎಂದು ತಿಳಿಸಿದರು. ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.