ಮಂಡ್ಯ : ಕ್ಷೇತ್ರದಲ್ಲಿ ಅಂದಾಜು 800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕೆರೆ ಮತ್ತು ನಾಲೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಳೆಗಾಲ ಶುರುವಾಗುವ ಮುನ್ನವೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಮದ್ದೂರು ತಾಲ್ಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ 5 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸೋಮನಹಳ್ಳಿ ಕೆರೆಯನ್ನು ಸ್ವಚ್ಚ, ಸೌಂದರ್ಯಕರಣ ಮಾಡಬೇಕೆಂಬ ಉದ್ದೇಶದಿಂದ ಈಗಾಗಲೇ 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಒತ್ತುವರಿ ತೆರವು, ಹೊಸ ತೂಬುಗಳ ನಿರ್ಮಾಣ, ಕೆರೆ ಹೂಳು ತೆಗೆಯುವ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ 5 ಕೋಟಿ ವೆಚ್ಚದಲ್ಲಿ ವಾಕಿಂಗ್ ಪಾತ್, ವಿದ್ಯುತ್ ದೀಪ, ನಾಲೆ, ರಸ್ತೆ, ಏರಿ ಹಾಗೂ ಕೊಡಿ ನಿರ್ಮಾಣ ಮಾಡಲು ಇಂದು ಚಾಲನೆ ನೀಡಲಾಗಿದೆ. ಕೋಡಿಹಳ್ಳಿ ಗ್ರಾಮವು ನಗರಸಭಾ ವ್ಯಾಪ್ತಿಗೆ ಸೇರಿರುವುದರಿಂದ ಈಗಾಗಲೇ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ 1800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ರಸ್ತೆ, ನೀರಾವರಿ, ಕುಡಿಯುವ ನೀರು, ಸಾರಿಗೆ, ಆಸ್ಪತ್ರೆ, ಶಿಕ್ಷಣ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ ಹಲವಾರು ಕಾಮಗಾರಿಗಳು ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಶೇಷವಾಗಿ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಸರ್ಕಾರ ಕೇಳಿದಷ್ಟು ಅನುದಾನ ನೀಡುತ್ತಿದೆ. ಹಲವಾರು ವರ್ಷಗಳಿಂದ ಸಾಕಷ್ಟು ಶಿಥಿಲಗೊಂಡಿದ್ದ ಕೆಮ್ಮಣ್ಣು ನಾಲಾ, ವೈದ್ಯನಾಥ, ಬೈರನ್, ಚಾಮನಹಳ್ಳಿ ಹಾಗೂ ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ನಾಲೆಗಳನ್ನು ಅಭಿವೃದ್ಧಿಯನ್ನು ಮಾಡಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಮುಂದಿನ 50 ವರ್ಷಗಳವರೆಗೆ ರೈತರ ಬೇಸಾಯಕ್ಕೆ ಯಾವುದೇ ತೊಂದರೆಯಾಗದಂತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಗ್ರಾಮದ ಮುಖಂಡರಾದ ಕೆ.ಹೆಚ್.ಕೃಷ್ಣೇಗೌಡ, ಅಪ್ಪೇಗೌಡ, ವೆಂಕಟೇಶ್, ಹನುಮೇಗೌಡ, ಮಹದೇವು, ತಮ್ಮಣ್ಣ, ಶಂಕರ್, ರವೀಂದ್ರ, ರಾಜು, ಕುಮಾರ್, ಪುಟ್ಟಪ್ಪ, ಶ್ರೀನಿವಾಸ್, ಸುರೇಶ್, ಬೋಮ್ಮಯ್ಯ, ತಿಮ್ಮಪ್ಪ, ಆರ್.ಸಿ.ಮಹೇಶ್, ಎಇಇ ನಾಗರಾಜ್, ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ರಾಜ್ಯದಲ್ಲಿ ವನ್ಯಜೀವಿಗಳಿಂದ ಬೆಳೆ ಹಾನಿ: ಶೀಘ್ರ ಪರಿಹಾರ ನೀಡಲು ಸಚಿವ ಈಶ್ವರ್ ಖಂಡ್ರೆ ಸೂಚನೆ
20 ಲಕ್ಷ ಬ್ಯಾರೆಲ್ ತೈಲ ಹೊತ್ತಿದ್ದ ಭಾರತದ ಟ್ಯಾಂಕರ್ ಮೇಲೆ ಇರಾನ್ ನೌಕಾಪಡೆಯಿಂದ ಗುಂಡಿನ ದಾಳಿ!








