ಉತ್ತರ ಪ್ರದೇಶ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಪ್ರವಾಹ ಪರಿಹಾರ ಕಾಮಗಾರಿಗಳ ವಿವರವಾದ ವರದಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ ನೀಡಿದ್ದಾರೆ.
ಸರಯೂ ನದಿಯ ಪ್ರವಾಹದಿಂದ ಹಾನಿಗೀಡಾದ ಗೋರಖ್ಪುರ, ಸಂತ ಕಬೀರ್ ನಗರ, ಬಸ್ತಿ, ಅಯೋಧ್ಯೆ, ಗೊಂಡಾ ಮತ್ತು ಬಾರಾಬಂಕಿಯಲ್ಲಿ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಸಂತ್ರಸ್ತ ಪ್ರದೇಶಗಳಲ್ಲಿ ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ನಡೆಸುವಂತೆ ಸೂಚಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು, ಪ್ರವಾಹದಿಂದ ಜೀವಹಾನಿ ಮತ್ತು ಪ್ರಾಣಿಗಳ ನಷ್ಟದಿಂದ ಸಂತ್ರಸ್ತರಾದ ಜನರಿಗೆ ನೆರವು ವಿತರಣೆಯನ್ನು ತ್ವರಿತವಾಗಿ ಮಾಡಬೇಕು. ಇದರೊಂದಿಗೆ ಅತಿ ಶೀಘ್ರದಲ್ಲಿ ಪ್ರವಾಹ ಪರಿಹಾರ ಸಾಮಗ್ರಿಗಳ ಪ್ಯಾಕೆಟ್ಗಳನ್ನು ವಿತರಿಸಬೇಕು .ಪ್ರವಾಹ ಪೀಡಿತ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿರುವ ಪರಿಹಾರ ಕಾರ್ಯಗಳ ವರದಿಯನ್ನು ನೀಡುವಂತೆ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವರದಿಯ ಪ್ರಕಾರ, ಗೋರಖ್ಪುರದ 41, ಗೊಂಡಾದ 24, ಬಾರಾಬಂಕಿಯ 19, ಬಸ್ತಿಯ 12 ಮತ್ತು ಅಯೋಧ್ಯೆ ಮತ್ತು ಸಂತ ಕಬೀರ್ ನಗರದ ತಲಾ ಒಂದು ಹಳ್ಳಿಗಳು ಸರಯು ನದಿಯ ಪ್ರವಾಹದಿಂದ ಹಾನಿಗೊಳಗಾಗಿವೆ ಎನ್ನಲಾಗುತ್ತಿದೆ.
ರಿಲೀಫ್ ಕಮಿಷನರ್ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ, ಪ್ರಸ್ತುತ ಅಜಂಗಢ, ಗೋರಖ್ಪುರ, ಬಾರಾಬಂಕಿ, ಗೊಂಡಾ, ಲಖಿಂಪುರ ಖೇರಿ, ಸಂತ ಕಬೀರ್ ನಗರ ಮತ್ತು ಸೀತಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳ 200 ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ. ಸುಮಾರು ಎರಡು ಲಕ್ಷ ಜನಸಂಖ್ಯೆಯು ಪ್ರವಾಹಕ್ಕೆ ಸಿಲುಕಿದೆ. ರಾಜ್ಯದಲ್ಲಿ ಪ್ರವಾಹ ಪರಿಹಾರಕ್ಕಾಗಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ನ ಒಟ್ಟು 23 ತಂಡಗಳು ಮತ್ತು ಪಿಎಸಿಯ 17 ತಂಡಗಳನ್ನು ನಿಯೋಜಿಸಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ಕಾನ್ಪುರ ನಗರದಲ್ಲಿ 1 ರಿಂದ 12 ನೇ ತರಗತಿಯವರೆಗೆ ಎಲ್ಲಾ ಮಂಡಳಿಗಳು ನಡೆಸುವ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.