ಬೆಳಗಾವಿ: ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿ ಪ್ರಮಾಣವನ್ನು ಶೇಕಡಾ 12ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರದಲ್ಲಿರುವ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಒತ್ತಾಯಿಸಿದ್ದಾರೆ.
ಇಲ್ಲಿನ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದ ಮುಖಂಡರು, ಈ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ, ಒಕ್ಕಲಿಗರ ಬೇಡಿಕೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ದೆಹಲಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಮಗುವಿನ ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹಿಂದೆ ಈ ಸಂಬಂಧ ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಕೂಡ ಮನವಿ ಕೊಟ್ಟಿದ್ದಾರೆ. ಹಾಗೆಯೇ ಈಗಲೂ ಒಕ್ಕಲಿಗ ಸಚಿವರು, ಶಾಸಕರು ಮನವಿ ಮಾಡಿದ್ದಾರೆ. ಈ ಎಲ್ಲ ಮನವಿಗಳನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ಸಚಿವರು ಪ್ರತಿಕ್ರಿಯೆ ನೀಡಿದರು.
ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 16ರಷ್ಟಿರುವ ಹಾಗೂ ವಿವಿಧ ಯೋಜನೆಗಳಿಂದಾಗಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿಯನ್ನು ಶೇಕಡ 12ಕ್ಕೆ ಹೆಚ್ಚಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಮಾತನಾಡಿ, ನಗರೀಕರಣ ಹಾಗೂ ಕೈಗಾರಿಕೀಕರಣಕ್ಕಾಗಿ ಕೃಷಿಯನ್ನು ನೆಚ್ಚಿಕೊಂಡ ಒಕ್ಕಲಿಗರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಒಕ್ಕಲಿಗರ ಸಂಖ್ಯೆ ಹೆಚ್ಚುತ್ತಿದೆ. ಈಗಿರುವ 3ಎ ಪ್ರವರ್ಗವು ಶೇಕಡ 20ರಷ್ಟು ಜನಸಂಖ್ಯೆ ಇರುವ ಸಮುದಾಯವನ್ನು ಪ್ರತಿನಿಧಿಸುತ್ತಿದೆ. ಆದರೆ ಇದಕ್ಕೆ ನಿಗದಿಗಾಗಿರುವುದು ಶೇಕಡ 4ರಷ್ಟು ಮೀಸಲಾತಿ ಮಾತ್ರ. ಇದರಲ್ಲಿ ಒಕ್ಕಲಿಗರಿಗೆ ಸಿಗುತ್ತಿರುವುದು ಶೇಕಡ 3ರಷ್ಟು ಮಾತ್ರ ಎಂಬ ಬಗ್ಗೆ ಗಮನ ಸೆಳೆದರು.
BIGG NEWS: ಸ್ನೇಹಿತರ ಜೊತೆ ಕಿರಿಕ್; ಮೊಹಮ್ಮದ್ ನಲಪಾಡ್ ವಿರುದ್ದ ದೂರು ದಾಖಲು
ಒಕ್ಕಲಿಗ ಸಮುದಾಯದ ಉಪಜಾತಿಗಳಾದ ಬಂಟರು, ರೆಡ್ಡಿಗಳು ಮತ್ತು ಕೊಂಚಟ್ಟಿಗರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲ. ಇದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಿದೆ. ತಕ್ಷಣವೇ ಇದನ್ನು ಸರಿಪಡಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಒತ್ತಾಯಿಸಿದರು.
ಸಚಿವ ಗೋಪಾಲಯ್ಯ ಮಾತನಾಡಿ, ಒಕ್ಕಲಿಗ ಸಮುದಾಯವು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕು ಎಂದರು.
ಸಚಿವರಾದ ಅರಗ ಜ್ಞಾನೇಂದ್ರ, ಡಾ.ಸುಧಾಕರ, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಶಾಸಕರಾದ ಕೃಷ್ಣಪ್ಪ, ಕೆ.ಜೆ.ಭೋಪಯ್ಯ, ಸುಕುಮಾರ ಶೆಟ್ಟಿ, ಡಾ.ರಾಜೇಶ ಗೌಡ, ಮಸಾಲೆ ಜಯರಾಂ, ರಾಜೇಶ ನಾಯ್ಕ, ತುಳಸಿ ಮುನಿರಾಜು, ಸತೀಶ ರೆಡ್ಡಿ, ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ, ಸೋಮಶೇಖರ ರೆಡ್ಡಿ, ಸಂಜೀವ ಮಟಂದೂರು, ಎಲ್ ನಾಗೇಂದ್ರ, ಭಾರತಿ ಶೆಟ್ಟಿ, ಅ.ದೇವೇಗೌಡ, ಪುಟ್ಟಣ್ಣ, ಚಿದಾನಂದ ಗೌಡ, ಎಸ್ ಆರ್ ವಿಶ್ವನಾಥ ಮತ್ತಿತರರು ಸಭೆಯಲ್ಲಿ ಇದ್ದರು.