ಬೆಂಗಳೂರು : ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ( Kittur Development Authority ) 50 ಕೋಟಿ ರೂ. ಅನುದಾನ ಒದಗಿಸಲಾಗಿದ್ದು ಇದೇ ವರ್ಷ ಬೆಳಗಾವಿ ಸುವರ್ಣಸೌಧದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ( Sangolli Rayanna Statue ) ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು.
ಅವರು ಇಂದು ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ್ದ “ಕಿತ್ತೂರು ಚೆನ್ನಮ್ಮಾಜಿ ವಿಜಯ ಜ್ಯೋತಿ ಯಾತ್ರೆ”ಗೆ ಚಾಲನೆ ನೀಡಿ ಮಾತನಾಡಿ, ಕಿತ್ತೂರು ಉತ್ಸವ ಪ್ರಾರಂಭವಾಗಿ 25-30 ವರ್ಷ ಆಗಿದೆ. ಮಧ್ಯೆ ಮಧ್ಯೆ ಕುಂಟುತ್ತಾ ಇದ್ದ ಉತ್ಸವಕ್ಕೆ ನಮ್ಮ ಸರ್ಕಾರ ಅಧಿಕೃತ ಆದೇಶದ ಮೂಲಕ ರಾಜ್ಯ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಣೆ ಮಾಡುತ್ತಿದೆ. ಹಿಂದೆ ತಾವು ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡಿ 3 ದಿನಗಳ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ದನ್ನು ಸ್ಮರಿಸಿದ ಅವರು, ಆಗ ಜ್ಯೋತಿ ಕಿತ್ತೂರಿನಿಂದ ಬೆಂಗಳೂರಿಗೆ ಚೆನ್ನಮ್ಮಳ ಸಂದೇಶ ಹೊತ್ತು ಬರುತ್ತಿತ್ತು. ಈಗ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕಿತ್ತೂರು ಸಂಸ್ಥಾನದ ರಾಜಧಾನಿ ಕಿತ್ತೂರಿಗೆ ಜ್ಯೋತಿ ಯಾತ್ರೆ ಬೆಳಸಿದೆ ಎಂದು ಹೇಳಿದರು.
ರಾಷ್ಟ್ರೀಯ ದಾಖಲೆಗಳಲ್ಲಿ ನೋಂದಣಿ
ಸ್ವಾತಂತ್ರ್ಯ ಹೋರಾಟದ ಮೊದಲ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಎಂಬುದಾಗಿ ನಮ್ಮ ಕರ್ನಾಟಕ ವಿಶ್ವವಿದ್ಯಾಲಯ ಗೆಜೆಟಿಯರ್ ನಲ್ಲಿ ಪ್ರಕಟಗೊಂಡಿದೆ. ಇದನ್ನು ರಾಷ್ಟ್ರೀಯ ಆರ್ಚೈವ್ಸ್ ದಾಖಲೆಗಳಿಗೂ ಸಹ ಕಳಿಸಿಕೊಟ್ಟು ನೊಂದಣಿ ಮಾಡಿಸುತ್ತೇವೆ ಎಂದು ತಿಳಿಸಿದರು.
ಕಿತ್ತೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ
ಕಿತ್ತೂರಿನಲ್ಲಿ ಶಿಥಿಲಗೊಡಿರುವ ಈಗಿರುವ ಅರಮನೆಯನ್ನು ಗಟ್ಟಿಗೊಳಿಸಿ, ಪಕ್ಕದಲ್ಲೇ ಹೊಸ ಅರಮನೆಯನ್ನೂ ಕಟ್ಟಿಸಲು ತೀರ್ಮಾನ ಮಾಡಲಾಗಿದೆ. ಇದರ ಜತೆಗೆ ಕಿತ್ತೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬೈಲಹೊಂಗಲ, ಸಂಗೊಳ್ಳಿ ಸೇರಿದಂತೆ ಕಿತ್ತೂರು ಸಂಸ್ಥಾನದ ಪ್ರಾಚೀನ ಕುರುಹುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಭೋಪಾಲ್: 1 ವರ್ಷದ ಬಾಲಕಿಯ ಶ್ವಾಸನಾಳ ಸೇರಿದ್ದ ʻಹೇರ್ ಪಿನ್ʼ ಹೊರ ತೆಗೆದ ವೈದ್ಯರು, ಶಸ್ತ್ರಚಿಕಿತ್ಸೆ ಯಶಸ್ವಿ
ಈಗಾಗಲೇ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ಪ್ರಾರಂಭ ಮಾಡಿದ್ದೇವೆ. ಮುಂದಿನ ತಿಂಗಳು ಸೈನಿಕ ಶಾಲೆ ಉದ್ಘಾಟನೆ ಮಾಡುತ್ತೇವೆ. ಇದರ ಜತೆಗೆ ರಾಯಣ್ಣನನ್ನು ನೇಣುಗಂಬಕ್ಕೆ ಹಾಕಿದ ನಂದಗಡ ಸಮಾಧಿ ಸ್ಥಳವನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನಿಂದ ಇಂದು ಪ್ರಾರಂಭವಾದ ವಿಜಯ ಜ್ಯೋತಿ ಯಾತ್ರೆ ಅಕ್ಟೋಬರ್ 23 ರಂದು ಕಿತ್ತೂರು ತಲುಪಲಿದೆ.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ಉಸ್ತುವಾರಿ ಗೋವಿಂದ ಕಾರಜೋಳ, ಸಚಿವ ಎಂಟಿಬಿ ನಾಗರಾಜ್, ಸಾಹಿತಿ ಲೀಲಾದೇವಿ ಆರ್ ಪ್ರಸಾದ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಅಹಿಂಸಾತ್ಮಕ ಹೋರಾಟದದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದ ಮಹಾನ್ ಚೇತನ ಗಾಂಧೀಜಿ ; ಸಚಿವ ಭೈರತಿ ಬಸವರಾಜ