ಯಾದಗಿರಿ : ಜಿಲ್ಲೆಯಾದ್ಯಂತ ಕಾಲರಾ ರೋಗ ಹೆಚ್ಚಳವಾಗಿದ್ದು, 20ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ಹೊತಪೇಟ ವಾಂತಿಭೇದಿ ಉಲ್ಬಣವಾಗಿ ಇಬ್ಬರು ಬಲಿಯಾದ ಘಟನೆ ತಾಲೂಕಿನ ಹೊತಪೇಟ ಗ್ರಾಮದಲ್ಲಿ ಜರುಗಿದೆ. ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದ ಹೊನ್ನಪ್ಪಗೌಡ ಮತ್ತು ಈರಮ್ಮ ಪಂಚಾಕ್ಷರಯ್ಯ ಎಂಬುವರು ಮೃತಪಟ್ಟಿದ್ದಾರೆ. ಸುಮಾರು 20ಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮದಲ್ಲಿಕಾಲರಾ ಭೀತಿ ಆವರಿಸಿದೆ ವಾಂತಿಭೇದಿಯಿಂದಾಗಿ, ಒಬ್ಬೊಬ್ಬರಾಗಿ ನಗರದ ಆಸ್ಪತ್ರೆಗೆ ದಾಖಲು ಆಗುತ್ತಿದ್ದಂತೆ ಗ್ರಾಮದಲ್ಲಿ ಭಯದ ವಾತಾವರಣ ಹೆಚ್ಚಾಗಿದೆ.
ತಾಲೂಕು ವೈದ್ಯಾಧಿಕಾರಿಗಳಿಗೆ ಸುದ್ದಿ ತಿಳಿಸಿದಾಗ ಗ್ರಾಮಕ್ಕೆ ವೈದ್ಯರ ತಂಡ ಧಾವಿಸಿ ತನಿಖೆ ನಡೆಸಿ ಅಶುದ್ಧವಾದ ಕುಡಿಯುವ ನೀರು ವಾಂತಿಭೇದಿಗೆ ಕಾರಣವಾಗಿದ್ದು, ಶುದ್ಧ ನೀರು ಸೇವಿಸಬೇಕು ಮತ್ತು ಕಾಲರಾ ಭಯ ಬೇಡ ಎಂದು ಹೇಳಿದ್ದಾರೆ.ಗ್ರಾಮದಲ್ಲಿ ಹಳೆಯಕಾಲದ ತೆರೆದ ಬಾವಿ ಇದೆ. ಗ್ರಾಮದ ಅರ್ಧದಷ್ಟು ಜನತೆ ಈ ನೀರನ್ನೇ ಸೇವಿಸುತ್ತಾರೆ.
ಇದೇ ಬಾವಿಯಿಂದಲೇ ಟ್ಯಾಂಕ್ಗೂ ನೀರು ಸರಬರಾಜು ಆಗುತ್ತದೆ. ಇಲ್ಲಿಂದಲೇ ಮನೆಮನೆಗೆ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ತೆರೆದ ಬಾವಿಯಾಗಿರುವುದರಿಂದ ಕೊಳೆತ, ಕಸ ಕಡ್ಡಿ ಇನ್ನಿತರ ತ್ಯಾಜ್ಯವೆಲ್ಲ ಬಾವಿಯಲ್ಲಿ ಬಿದ್ದು ನೀರು ಸಂಪೂರ್ಣ ಕಲುಷಿತಗೊಂಡಿದೆ. ಇದೇ ನೀರು ಸೇವನೆ ಮಾಡಿರುವುದರಿಂದಲೇ ವಾಂತಿಭೇದಿಗೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಸದ್ಯಕ್ಕೆ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ತಂಡ ಬೀಡು ಬಿಟ್ಟಿದ್ದು ಸಕಲ ವ್ಯವಸ್ಥೆ ಏರ್ಪಾಡು ಮಾಡಲಾಗಿದೆ. ನೀರು ತಪಾಸಣೆಗೆ ಕಳುಹಿಸಲಾಗಿದ್ದು, ತೀವ್ರ ಅಸ್ವಸ್ಥರನ್ನು ಜಿಲ್ಲಾಆಸ್ಪತ್ರೆಗೆ ರವಾನಿಸಿದ್ದು ಇನ್ನುಳಿದವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಗುತ್ತೇದಾರ್ ತಿಳಿಸಿದ್ದಾರೆ.