ಚಿತ್ರದುರ್ಗ : ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪದಿಂದ ಜನ ಬಸವಳಿದಿದ್ದಾರೆ. ಇನ್ನು ಬಯಲುಸೀಮೆಯ ಕುರುಚಲು ಕಾಡಿನಲ್ಲಿ ಹಸಿರು ಮರೆಯಾಗಿ ಕಪ್ಪುಗಟ್ಟುತ್ತಿದೆ. ಹೀಗಿರುವಾಗಲೇ ಅಲರ್ಟ್ ಆಗಿರುವ ಅರಣ್ಯ ಇಲಾಖೆ, ಚಿತ್ರದುರ್ಗದ ಊಟಿ ಎಂದೇ ಖ್ಯಾತಿಯಾಗಿರುವ ಜೋಗಿಮಟ್ಟಿ ವನ್ಯಧಾಮನಕ್ಕೆ ಮಳೆಗಾಲ ಆರಂಭವಾಗುವವರೆಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಹೌದು ಚಿತ್ರದುರ್ಗದ ಊಟಿ ಖ್ಯಾತಿಯ ಜೋಗಿಮಟ್ಟಿ ವನ್ಯಧಾಮ ಬೇಸಿಗೆಯ ತೀವ್ರ ಬಿಸಿಲಿನಿಂದ ಒಣಗುತ್ತಿದೆ. ಹೀಗಾಗಿ ಅಗ್ನಿ ಅವಘಡ ಅಪಾಯ ಹೆಚ್ಚಿರುವ ಮತ್ತು ಪ್ರಾಣಿ-ಪಕ್ಷಿಗಳ ರಕ್ಷಣೆಗಾಗಿ, ಅರಣ್ಯ ಇಲಾಖೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿದೆ. ಮಳೆಗಾಲ ಆರಂಭದ ನಂತರ ಈ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೋಗಿಮಟ್ಟಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ. ಅಲ್ಲದೆ ಸಮುದ್ರ ಮಟ್ಟದಿಂದ ಸುಮಾರು ಮೂರುವರೆ ಸಾವಿರ ಅಡಿಯಷ್ಟು ಎತ್ತರ ಪ್ರದೇಶದಲ್ಲಿದ್ದು, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲೊಂದಾಗಿದೆ. ಹೀಗಾಗಿ, ನಿತ್ಯ ಪ್ರವಾಸಿಗರು, ಪರಿಸರ ಪ್ರಿಯರು ಜೋಗಿಮಟ್ಟಿ ವೀಕ್ಷಣೆಗೆ ಬಂದು ನಿರಾಸೆಯಿಂದ ವಾಪಸ್ ಆಗುವುದು ಸಹಜವಾಗಿದೆ. ಆದರೆ ಕಾಡು ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಮುಂಜಾಗೃತೆ ಕ್ರಮವಹಿಸಿದೆ.