ಲಂಡನ್:ಬ್ರಿಟನ್ನಲ್ಲಿ ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅತ್ಯಾಧುನಿಕ ಆನ್ಲೈನ್ ವಯಸ್ಸಿನ ದೃಢೀಕರಣ ವ್ಯವಸ್ಥೆಯನ್ನು (Online Age Verification) ಮಕ್ಕಳು ಬಹಳ ತಮಾಷೆಯಾಗಿ ಮಂಕುಬೂದಿ ಎರಚುತ್ತಿದ್ದಾರೆ. ಮುಖದ ಮೇಲೆ ಐಲೈನರ್ ಅಥವಾ ಪೆನ್ಸಿಲ್ಗಳಿಂದ ನಕಲಿ ಮೀಸೆ (Fake Moustache) ಬಿಡಿಸಿಕೊಳ್ಳುವ ಮೂಲಕ ತಾವು ವಯಸ್ಕರು ಎಂದು ಸಾಫ್ಟ್ವೇರ್ಗಳನ್ನು ನಂಬಿಸುತ್ತಿರುವ ಆಘಾತಕಾರಿ ಮತ್ತು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.
‘ಇಂಟರ್ನೆಟ್ ಮ್ಯಾಟರ್ಸ್’ (Internet Matters) ಎಂಬ ಮಕ್ಕಳ ಸುರಕ್ಷಾ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಬ್ರಿಟನ್ನ ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ವಿವಿಧ ಮಾರ್ಗಗಳ ಮೂಲಕ ಆನ್ಲೈನ್ ಸುರಕ್ಷತಾ ಕ್ರಮಗಳನ್ನು ಮೀರುತ್ತಿದ್ದಾರೆ.
ಪೋರ್ನೋಗ್ರಫಿ ಅಥವಾ ಹಿಂಸಾತ್ಮಕ ಗೇಮಿಂಗ್ ಸೈಟ್ಗಳನ್ನು ಪ್ರವೇಶಿಸಲು ಈಗ ಬ್ರಿಟನ್ನಲ್ಲಿ ಸೆಲ್ಫಿ ಅಥವಾ ಫೇಸ್ ಸ್ಕ್ಯಾನಿಂಗ್ ಮೂಲಕ ವಯಸ್ಸನ್ನು ಸಾಬೀತುಪಡಿಸುವುದು ಕಡ್ಡಾಯ. ಆದರೆ, 12 ವರ್ಷದ ಬಾಲಕನೊಬ್ಬ ತನ್ನ ಮುಖದ ಮೇಲೆ ಐಲೈನರ್ನಿಂದ ಮೀಸೆ ಬಿಡಿಸಿಕೊಂಡು ಸ್ಕ್ಯಾನ್ ಮಾಡಿದಾಗ, ಎಐ (AI) ವ್ಯವಸ್ಥೆಯು ಆತನ ವಯಸ್ಸು 15 ಎಂದು ದೃಢೀಕರಿಸಿದೆ!
ಬಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ವಯಸ್ಸಿನ ಪತ್ತೆ ಹಚ್ಚುವ ಸಾಫ್ಟ್ವೇರ್ಗಳು ಕೇವಲ ಒಂದು ನಕಲಿ ಮೀಸೆಗೆ ಸೋಲುತ್ತಿರುವುದು ತಂತ್ರಜ್ಞಾನ ಲೋಕಕ್ಕೆ ಮುಜುಗರ ತಂದಿದೆ.
ಅಚ್ಚರಿಯೆಂದರೆ, ಶೇ. 17ರಷ್ಟು ಪೋಷಕರು ತಾವೇ ಸ್ವತಃ ಮಕ್ಕಳಿಗೆ ಇಂತಹ ನಿರ್ಬಂಧಿತ ಸೈಟ್ಗಳನ್ನು ಪ್ರವೇಶಿಸಲು ಸುಳ್ಳು ಮಾಹಿತಿ ನೀಡಿ ಸಹಾಯ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.








