ನವದೆಹಲಿ: ದೇಶದ ಸುರಕ್ಷತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ‘ವಾಯುದಾಳಿ ಎಚ್ಚರಿಕೆ ವ್ಯವಸ್ಥೆ’ (Air Raid Warning System – ARWS) ಯೋಜನೆಯಡಿ ಭಾರತದ ಸೂಕ್ಷ್ಮ ಜಿಲ್ಲೆಗಳಲ್ಲಿ ಆಧುನಿಕ ಎಚ್ಚರಿಕೆ ವ್ಯವಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ. ಈ ಮಹತ್ವದ ಉಪಕ್ರಮವನ್ನು ಮುನ್ನಡೆಸಲು ವಾಯುಪಡೆಯ (IAF) ಮಾಜಿ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯು ಪೂರ್ಣಗೊಂಡಾಗ, ಗಡಿ ಭಾಗದ ಜಿಲ್ಲೆಗಳೇ ಪ್ರಮುಖವಾಗಿರುವ ದೇಶದ ಒಟ್ಟು 244 ಸೂಕ್ಷ್ಮ ಜಿಲ್ಲೆಗಳು ವಾಯುದಾಳಿ ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದು ಡ್ರೋನ್ಗಳು, ಕ್ಷಿಪಣಿಗಳು ಮತ್ತು ವೈರಿ ವಿಮಾನಗಳಂತಹ ವಾಯು ಬೆದರಿಕೆಗಳ ಬಗ್ಗೆ ನಾಗರಿಕರಿಗೆ ತಕ್ಷಣ ಎಚ್ಚರಿಕೆ ನೀಡಲು ಸಹಾಯ ಮಾಡುತ್ತದೆ.
ವ್ಯವಸ್ಥೆಯು ನಾಗರಿಕ ರಕ್ಷಣಾ ಕೈಪಿಡಿ (Civil Defence Manual) ನಿರ್ದೇಶಿಸುವ ಮಾನದಂಡಗಳ ಪ್ರಕಾರ ನೆಲಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ ನಂತರ ಈ ಹೊಸ ಎಚ್ಚರಿಕೆ ವ್ಯವಸ್ಥೆಯ ಅಗತ್ಯವನ್ನು ಸರ್ಕಾರ ಗುರುತಿಸಿದೆ. ಯುದ್ಧಭೂಮಿಯಲ್ಲಿ ಡ್ರೋನ್ಗಳ ಬಳಕೆಯು ಹೆಚ್ಚಾಗುತ್ತಿರುವುದರಿಂದ, ನಾಗರಿಕರ ರಕ್ಷಣೆಗಾಗಿ ಇಂತಹ ಸುಧಾರಿತ ವ್ಯವಸ್ಥೆ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಯುಪಡೆಯ ಪರಿಣತರ ನೇಮಕ: ಗೃಹ ಸಚಿವಾಲಯದ ಅಡಿಯಲಿರುವ ‘ಫೈರ್ ಸರ್ವಿಸ್, ಸಿವಿಲ್ ಡಿಫೆನ್ಸ್ & ಹೋಮ್ ಗಾರ್ಡ್ಸ್’ ನಿರ್ದೇಶನಾಲಯವು ಈ ಯೋಜನೆಯ ನೇತೃತ್ವ ವಹಿಸಿದೆ. ವಾಯು ರಕ್ಷಣಾ ಕಾರ್ಯಾಚರಣೆಗಳು, ರೇಡಾರ್ ವ್ಯವಸ್ಥೆಗಳು ಮತ್ತು ವಾಯುದಾಳಿ ಎಚ್ಚರಿಕೆ ಕಾರ್ಯವಿಧಾನಗಳಲ್ಲಿ ಅಪಾರ ಅನುಭವ ಹೊಂದಿರುವ ವಾಯುಪಡೆಯ ಮಾಜಿ ಅಧಿಕಾರಿಗಳನ್ನು (ವಿಂಗ್ ಕಮಾಂಡರ್ ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯವರು) ಈ ಯೋಜನೆಗಾಗಿ ನೇಮಿಸಿಕೊಳ್ಳಲಾಗುತ್ತಿದೆ.








