ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ, 2025ನ್ನು ಇತ್ತೀಚೆಗೆ ಸಂಸತ್ತು ಅಂಗೀಕರಿಸಿದೆ ಮತ್ತು2025ರ ಏಪ್ರಿಲ್ 8 ರಿಂದ ಅದು ಜಾರಿಗೆ ಬಂದಿದೆ. ಇದು ಜಾರಿಗೆ ಬಂದ ಕೂಡಲೇ, ಕಾಯ್ದೆಯ ಕಾರ್ಯಾಚರಣೆಯನ್ನು/ಅನುಷ್ಠಾನವನ್ನು ತಡೆಹಿಡಿಯುವಂತೆ ಕೋರಿ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಯಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಈ ವಿಷಯಗಳಲ್ಲಿ ಯಾವುದೇ ಮಧ್ಯಂತರ ಪರಿಹಾರ ನೀಡುವುದನ್ನು ಬಲವಾಗಿ ವಿರೋಧಿಸಿ ಸರ್ಕಾರವು ಪ್ರಾಥಮಿಕ ಪ್ರತಿ ಅಫಿಡವಿಟ್ ಸಲ್ಲಿಸಿದೆ. ಇದು ಹಿಂದಿನ ಪೂರ್ವನಿದರ್ಶನಗಳನ್ನು, ವಿಶೇಷವಾಗಿ 1995 ರ ವಕ್ಫ್ ಕಾಯ್ದೆಯನ್ನು ಪ್ರಶ್ನಿಸುವ ಪ್ರಕರಣಗಳನ್ನು ಮತ್ತು 2013ರ ಅದರ ತಿದ್ದುಪಡಿಗಳನ್ನು ಉಲ್ಲೇಖಿಸಿದೆ. “ಮೂಲ ಅರ್ಜಿಗಳು” ಎಂದು ಕರೆಯಲ್ಪಡುವ ಆ ಪ್ರಕರಣಗಳಲ್ಲಿ ಹಲವಾರು ಪ್ರಶ್ನೆಗಳನ್ನು ಮಾಡಲಾಗಿದೆ, ಆದರೆ ನ್ಯಾಯಾಲಯಗಳು ಯಾವುದೇ ಮಧ್ಯಂತರ ತಡೆಯಾಜ್ಞೆಯನ್ನು ನೀಡಿಲ್ಲ. ಆ ಅನೇಕ ಅರ್ಜಿಗಳು ಇನ್ನೂ ವಿವಿಧ ಹೈಕೋರ್ಟ್ ಗಳು ಮತ್ತು ಸುಪ್ರೀಂ ಕೋರ್ಟಿನಲ್ಲಿ ಬಾಕಿ ಉಳಿದಿವೆ ಮತ್ತು ಯಾವುದೇ ಮಧ್ಯಂತರ ಪರಿಹಾರವಿಲ್ಲದೆ ಮುಂದುವರಿಯುತ್ತಿವೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ.
2022ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಮಾಡಿದ ಮಹತ್ವದ ಅವಲೋಕನವನ್ನು ಉಲ್ಲೇಖಿಸಿರುವುದು ಸಹ ಆಸಕ್ತಿದಾಯಕವಾಗಿದೆ. ಆ ಸಮಯದಲ್ಲಿ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ಕಾನೂನಿನ ಸಾಂವಿಧಾನಿಕತೆಯನ್ನು ಸಂಪೂರ್ಣವಾಗಿ ಸೈದ್ಧಾಂತಿಕ ಅಥವಾ ಅಮೂರ್ತ ರೀತಿಯಲ್ಲಿ ಪ್ರಶ್ನಿಸಲಾಗುವುದಿಲ್ಲ, ಏಕೆಂದರೆ ಅದು ಕೇವಲ ಶೈಕ್ಷಣಿಕ ಅಭ್ಯಾಸವಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. ಅಂತಹ ಸವಾಲನ್ನು ಸ್ವೀಕರಿಸಲು/ಅನುಮತಿಸಲು, ನಿಜವಾದ ಬಾಧಿತ ಪಕ್ಷ/ಪಕ್ಷಕಾರರು ಮತ್ತು ಆ ಕ್ಲೇಮ್/ ಹಕ್ಕನ್ನು ಬೆಂಬಲಿಸುವ ನಿರ್ದಿಷ್ಟ ವಸ್ತುನಿಷ್ಟ ಸಂಗತಿಗಳು ಇರಬೇಕು ಎಂದು ನ್ಯಾಯಾಲಯವು ಆಗ ಒತ್ತಿ ಹೇಳಿತ್ತು.
ಈ ಪೂರ್ವನಿದರ್ಶನ ಮತ್ತು ಈ ಹಿಂದೆ ಇದೇ ರೀತಿಯ ಪ್ರಕರಣಗಳನ್ನು ನಿರ್ವಹಿಸಿದ ನಂತರ, ವಕ್ಫ್ ತಿದ್ದುಪಡಿ ಕಾಯ್ದೆ, 2025 ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಪ್ರಸ್ತುತ ಅರ್ಜಿಗಳಿಗೆ ಸಂಬಂಧಿಸಿ ಮಧ್ಯಂತರ ಪರಿಹಾರವನ್ನು ನೀಡದೆ ಸ್ಥಿರತೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವಂತೆ ಸರ್ಕಾರ ನ್ಯಾಯಾಂಗವನ್ನು ಕೋರಿದೆ.
ಕಾನೂನಿನ ಸಿಂಧುತ್ವದ ಯಾವುದೇ ಪರಿಶೀಲನೆಯು ಅಮೂರ್ತ ಕಾಳಜಿಗಳಿಗಿಂತ ಸುಪ್ರೀಂ ಕೋರ್ಟ್ ಈಗಾಗಲೇ ಸ್ಥಾಪಿಸಿದ ನ್ಯಾಯಾಂಗ ತತ್ವಗಳಿಗೆ ಅನುಗುಣವಾಗಿ ದೃಢವಾದ ವಸ್ತುಸ್ಥಿತಿ ಸಂಗತಿಗಳು ಮತ್ತು ನೈಜ ಕುಂದುಕೊರತೆಗಳನ್ನು ಆಧರಿಸಿರಬೇಕು ಎಂದು ಸರ್ಕಾರ ದೃಢವಾಗಿ ನಂಬುತ್ತದೆ.
BREAKING: ಭಾರತೀಯ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಪತಿಯಿಂದ ವಿವಾಹ ವಿಚ್ಛೇಧನ | Mary Kom
BBMPಯ ನೂತನ ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್, ಆಡಳಿತಗಾರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ