ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆಯಾದರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದೀಗ ಬಿಎಸ್ ಯಡಿಯೂರಪ್ಪ ವಿರುದ್ಧ ಮತ್ತೊಂದು ಆರೋಪ ಮಾಡಿರುವ ಶಾಸಕ ಯತ್ನಾಳ್ ನನ್ನನ್ನು ಸೋಲಿಸಲು ಬಿಎಸ್ ಯಡಿಯೂರಪ್ಪ ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಮಾತನಾಡಿದರೆ ಸರಿ ಇರಲ್ಲ. ಶ್ರೀಗಳ ಬಗ್ಗೆ ಯಾರಾದರೂ ಮಾತನಾಡಿದರೆ ಪರಿಣಾಮ ಸರಿ ಇರಲ್ಲ. ನನ್ನನ್ನು ಸೋಲಿಸುವುದಕ್ಕೂ ಯಡಿಯೂರಪ್ಪ ಪ್ರಯತ್ನ ಮಾಡಿದ್ದರು. ನಾನು ಕೇವಲ ಹಿಂದುಗಳ ಮತಗಳಿಂದ ಗೆದ್ದಿದ್ದು. ಯಡಿಯೂರಪ್ಪ ಬ್ಲಾಕ್ಮೇಲ್ ಮಾಡಿ ದೊಡ್ಡ ವ್ಯಕ್ತಿ ಆಗಿದ್ದಾನೆ. ಭ್ರಷ್ಟಾಚಾರದಿಂದಾಗಿ ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಕೆಳಗಿಳಿದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವ ವಿಚಾರವಾಗಿ, ವಿಜಯಪುರದಲ್ಲಿ ಯತ್ನಾಳ್ ಬೆಂಬಲಿಗರ ಪ್ರತಿಭಟನೆ ಮುಂದುವರೆದಿದೆ. ನಿನ್ನೆ ರಾಷ್ಟೀಯ ಹೆದ್ದಾರಿ 52ರ ಬಳಿ ಬೆಂಗಳೂರು ಬೈಪಾಸ್ ನಲ್ಲಿ ಪ್ರತಿಭಟನೆ ನಡೆಸಿದರು. ಶಾಸಕ ಯತ್ನಾಳ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಜಯಘೋಷ ಕೂಗಿದರು. ಕೂಡಲೇ ಶಾಸಕ ಯತ್ನಾಳ್ ಉಚ್ಚಾಟನೆಯನ್ನು ಆದೇಶವನ್ನು ಹಿಂಪಡೆಯುವಂತೆ ಯತ್ನಾಳ್ ಬೆಂಬಲಿಗರು ಆಗ್ರಹಿಸಿದರು.