ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಅಂತಿಮ ಹಂತದತ್ತ ಸಾಗುತ್ತಿದ್ದು, ಇಡೀ ದೇಶದ ಗಮನ ಸೆಳೆದಿದ್ದ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅಭೂತಪೂರ್ವ ಸಾಧನೆ ಮಾಡಿದೆ. ಆರಂಭಿಕ ಹಂತದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ವಿಜಯ್ ಅವರ ಪಕ್ಷ, ಇದೀಗ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ‘ಸೆಂಚೂರಿ’ ಬಾರಿಸಿದೆ. ಈ ಬೆಳವಣಿಗೆಯು ದ್ರಾವಿಡ ರಾಜಕಾರಣದ ದಿಗ್ಗಜ ಪಕ್ಷಗಳಾದ ಡಿಎಂಕೆ ಮತ್ತು ಎಐಡಿಎಂಕೆಗೆ ಭಾರಿ ಆಘಾತ ನೀಡಿದೆ.
ಸ್ತಬ್ದವಾದ ಡಿಎಂಕೆ ಪಾಳಯ; ಸ್ಟಾಲಿನ್‌ಗೆ ಮುಖಭಂಗ
ಕಳೆದ ಐದು ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟಕ್ಕೆ ಈ ಫಲಿತಾಂಶ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯದ ಮಾಹಿತಿ ಪ್ರಕಾರ ಡಿಎಂಕೆ 52 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, ಆಡಳಿತ ವಿರೋಧಿ ಅಲೆ ಮತ್ತು ವಿಜಯ್ ಅವರ ಜನಪ್ರಿಯತೆ ಸ್ಟಾಲಿನ್ ಅವರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ಪ್ರಬಲ ಸಂಘಟನೆ ಹೊಂದಿದ್ದರೂ ಸಹ, ಯುವ ಮತದಾರರು ಮತ್ತು ಮಹಿಳಾ ಮತದಾರರು ‘ಟಿವಿಕೆ’ ಕೈ ಹಿಡಿದಿರುವುದು ಡಿಎಂಕೆ ನಾಯಕರ ಮುಖಭಂಗಕ್ಕೆ ಕಾರಣವಾಗಿದೆ.
ಕುಸಿತ ಕಂಡ ಎಐಡಿಎಂಕೆ ಪ್ರಾಬಲ್ಯ
ಇನ್ನೊಂದೆಡೆ, ರಾಜ್ಯದ ಮತ್ತೊಂದು ಪ್ರಬಲ ವಿರೋಧ ಪಕ್ಷವಾದ ಎಐಡಿಎಂಕೆ ಕೇವಲ 42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರ ನೇತೃತ್ವದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರೂ, ವಿಜಯ್ ಅವರ ಹೊಸ ರಾಜಕೀಯ ಅಲೆಯ ಮುಂದೆ ಎಐಡಿಎಂಕೆಯ ಸಾಂಪ್ರದಾಯಿಕ ಮತಬ್ಯಾಂಕ್ ಛಿದ್ರವಾಗಿದೆ. ದಶಕಗಳಿಂದ ತಮಿಳುನಾಡು ಕಂಡಿದ್ದ ದ್ವಿಪಕ್ಷೀಯ ರಾಜಕಾರಣಕ್ಕೆ ವಿಜಯ್ ಅವರು ತೆರೆ ಎಳೆದಿದ್ದು, ಮೂರನೇ ಪರ್ಯಾಯ ಶಕ್ತಿಯಾಗಿ ಉದಯಿಸಿದ್ದಾರೆ.
ವಿಜಯ್‌ರ ‘ಮ್ಯಾಜಿಕ್’ ಗೆಲುವಿನ ಹಾದಿ
ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ವಿಜಯ್, ರಾಜಕೀಯ ಪ್ರವೇಶಿಸಿದ ಮೊದಲ ಚುನಾವಣೆಯಲ್ಲೇ ಈ ಮಟ್ಟದ ಯಶಸ್ಸು ಗಳಿಸಿರುವುದು ರಾಜಕೀಯ ವಿಶ್ಲೇಷಕರನ್ನು ಬೆರಗುಗೊಳಿಸಿದೆ. ‘ಟಿವಿಕೆ’ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಭರ್ಜರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಚೆನ್ನೈ ಸೇರಿದಂತೆ ಪ್ರಮುಖ ನಗರ ಪ್ರದೇಶಗಳಲ್ಲಿ ವಿಜಯ್ ಪರ ಅಲೆ ಎದ್ದಿರುವುದು ಸ್ಪಷ್ಟವಾಗಿದೆ. ಇಂದಿನ ಈ ಫಲಿತಾಂಶ ತಮಿಳುನಾಡು ರಾಜಕಾರಣದಲ್ಲಿ ಹೊಸ ಯುಗದ ಆರಂಭ ಎಂದು ವಿಶ್ಲೇಷಿಸಲಾಗುತ್ತಿದೆ.








