ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಅಭೂತಪೂರ್ವ ಮುನ್ನಡೆ ಸಾಧಿಸಿದೆ. ಸದ್ಯದ ಟ್ರೆಂಡ್‌ಗಳ ಪ್ರಕಾರ, ರಾಜ್ಯದ ಒಟ್ಟು ಕ್ಷೇತ್ರಗಳ ಪೈಕಿ ಬರೋಬ್ಬರಿ 101 ಸ್ಥಾನಗಳಲ್ಲಿ ಟಿವಿಕೆ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಳ್ಳುವ ಮೂಲಕ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿದ್ದಾರೆ.
ಚುನಾವಣಾ ಪ್ರಚಾರದ ಆರಂಭದಿಂದಲೂ ಯುವ ಸಮೂಹ ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ವಿಜಯ್, ಈಗ ಮತ ಎಣಿಕೆಯಲ್ಲೂ ತಮ್ಮ ವರ್ಚಸ್ಸನ್ನು ಸಾಬೀತುಪಡಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳ ಅಧಿಪತ್ಯವಿದ್ದ ತಮಿಳುನಾಡಿನಲ್ಲಿ, ಮೂರನೇ ಪರ್ಯಾಯ ಶಕ್ತಿಯಾಗಿ ಟಿವಿಕೆ ಉದಯಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಜಯ್ ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಆರಂಭಿಸಿದ್ದಾರೆ.
ಕರೂರಿನಲ್ಲಿ ದುರಂತದ ನಡುವೆಯೂ ವಿಜಯದ ನಗು ಅತ್ಯಂತ ಕುತೂಹಲಕಾರಿ ಮತ್ತು ಭಾವನಾತ್ಮಕ ಬೆಳವಣಿಗೆಯೆಂದರೆ ಕರೂರು ವಿಧಾನಸಭಾ ಕ್ಷೇತ್ರ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರೂರಿನಲ್ಲಿ ವಿಜಯ್ ಅವರ ಸಮಾವೇಶದ ವೇಳೆ ಕಾಲ್ತುಳಿತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತವು ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಆಘಾತಕಾರಿ ಎಂಬಂತೆ ಅದೇ ಕ್ಷೇತ್ರದಲ್ಲಿ ಟಿವಿಕೆ ಪಕ್ಷವು ಈಗ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ವಿರೋಧ ಪಕ್ಷಗಳಿಗೆ ಶಾಕ್ ನೀಡಿದೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವಿಜಯ್ ನೀಡಿದ ಸಾಂತ್ವನ ಮತ್ತು ಪಕ್ಷದ ಕಾರ್ಯಕರ್ತರು ತೋರಿದ ಸಂಯಮ ಜನರಲ್ಲಿ ನಂಬಿಕೆ ಮೂಡಿಸಿದೆ ಎಂದು ಹೇಳಲಾಗುತ್ತಿದೆ. ಕರೂರು ಜನರ ಈ ಬೆಂಬಲವು ಟಿವಿಕೆ ಪಾಲಿಗೆ ದೊಡ್ಡ ಆನೆಯ ಬಲ ತಂದಿದೆ. ಕೇವಲ ಸಿನಿಮಾ ಸ್ಟಾರ್ ಆಗಿ ಮಾತ್ರವಲ್ಲದೆ, ಜನರ ಕಷ್ಟಕ್ಕೆ ಸ್ಪಂದಿಸುವ ನಾಯಕನಾಗಿ ವಿಜಯ್ ಅವರನ್ನು ಮತದಾರರು ಸ್ವೀಕರಿಸಿದ್ದಾರೆ ಎಂಬುದು ಈ ಮುನ್ನಡೆಯಿಂದ ಸಾಬೀತಾಗುತ್ತಿದೆ.








