ನವದೆಹಲಿ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ಆಮದನ್ನು ಕಡಿಮೆ ಮಾಡಲು ವಿದೇಶಿ ಬ್ರಾಂಡೆಡ್ ಔಷಧಗಳ ಮೇಲೆ 100% ಸುಂಕ (Tariff) ವಿಧಿಸುವ ಸುಳಿವು ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳ ಫಾರ್ಮಾ ಕಂಪನಿಗಳಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆಯಿದೆ.
ಇದು ಅಮೆರಿಕದಲ್ಲಿನ ಬ್ರಾಂಡೆಡ್ ಔಷಧಗಳ ಬೆಲೆ ಏರಿಕೆಗೆ ಕಾರಣವಾಗುವುದಲ್ಲದೆ, ಜಾಗತಿಕ ಔಷಧ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗಳಿಗೆ ನಾಂದಿ ಹಾಡಲಿದೆ. ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಕಂಪನಿಗಳ ಮೇಲೆ 100% ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ.
ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಒತ್ತಡ ಹೇರುವುದು, ಔಷಧಗಳಿಗಾಗಿ ಚೀನಾ ಅಥವಾ ಇತರ ದೇಶಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡುವುದು ಮತ್ತು ಅಮೆರಿಕದ ಒಳಗೇ ಉದ್ಯೋಗ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು ಈ ನೀತಿಯ ಮುಖ್ಯ ಗುರಿಯಾಗಿದೆ.
ಒಂದು ಕಂಪನಿಯು ತನ್ನ ಔಷಧಗಳನ್ನು ಅಮೆರಿಕದಲ್ಲೇ ತಯಾರಿಸಲು ಒಪ್ಪಂದ ಮಾಡಿಕೊಂಡರೆ, ಅಂತಹ ಕಂಪನಿಯ ಆಮದುಗಳ ಮೇಲೆ ಸುಂಕವನ್ನು 20% ಕ್ಕೆ ಇಳಿಸಲಾಗುತ್ತದೆ. ನಾಲ್ಕು ವರ್ಷದ ಒಳಗಡೆ ಅಥವಾ 2030 ರ ಹೊತ್ತಿಗೆ ಅಮೆರಿಕದಲ್ಲಿ ಉತ್ಪಾದನೆ ಪೂರ್ಣಗೊಳ್ಳದಿದ್ದರೆ ಸಂಕ ಮತ್ತೆ 100% ಕ್ಕೆ ಏರಬಹುದು. ಒಂದು ಕಂಪನಿಯು ಅಮೆರಿಕದಲ್ಲಿ ಉತ್ಪಾದನಾ ಘಟಕ ತೆರೆಯುವುದರ ಜೊತೆಗೆ, ಅಮೆರಿಕಕ್ಕೆ ಅತಿ ಕಡಿಮೆ ಬೆಲೆಗೆ ಔಷಧ ನೀಡಲು ಒಪ್ಪಂದ ಮಾಡಿಕೊಂಡರೆ ಮಾತ್ರ ಯಾವುದೇ ಸುಂಕ ಇರುವುದಿಲ್ಲ.
ದೊಡ್ಡ ಕಂಪನಿಗಳಿಗೆ ತಮ್ಮ ಯೋಜನೆ ತಿಳಿಸಲು 120 ದಿನಗಳ ಕಾಲಾವಕಾಶ ನೀಡಲಾಗಿದೆ, ಸಣ್ಣ ಕಂಪನಿಗಳಿಗೆ 180 ದಿನಗಳ ಗಡುವು ನೀಡಲಾಗಿದೆ. ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್ನಂತಹ ದೇಶಗಳ ಔಷಧಗಳಿಗೆ ಒಪ್ಪಂದದ ಪ್ರಕಾರ ಕೇವಲ 15% ಸುಂಕ ಅನ್ವಯವಾಗುತ್ತದೆ. ಬ್ರಿಟನ್ಗೆ ಇದಕ್ಕಿಂತಲೂ ಕಡಿಮೆ ದರ ಅಥವಾ ಸಂಪೂರ್ಣ ವಿನಾಯಿತಿ ಸಿಗುವ ಸಾಧ್ಯತೆಯಿದೆ.








