ನವದೆಹಲಿ : ದೆಹಲಿಯಲ್ಲಿ ಕಾರು ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿ ಬಯಲಾಗಿದ್ದು, ಭಾರತದಾದ್ಯಂತ ಹಲವು ನಗರಗಳಲ್ಲಿ ಸುಮಾರು 8 ಭಯೋತ್ಪಾದಕರು ಸರಣಿ ಸ್ಫೋಟ(Blast)ಗಳನ್ನು ನಡೆಸಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ತನಿಖಾ ಸಂಸ್ಥೆಗಳು ಗುರುವಾರ ತಿಳಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಭಯೋತ್ಪಾದಕರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು, ಅವರು ತಮ್ಮೊಂದಿಗೆ ಬಹು ಐಇಡಿಗಳನ್ನು ಸಾಗಿಸಬೇಕಿತ್ತು. ಸುಮಾರು 8 ಶಂಕಿತರು ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜಿಸಿದ್ದರು. ಅವರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.
ಡಾ. ಮುಜಮ್ಮಿಲ್, ಡಾ. ಅದೀಲ್, ಉಮರ್ ಮತ್ತು ಶಾಹೀನ್ ಜಂಟಿಯಾಗಿ ಸುಮಾರು 20 ಲಕ್ಷ ರೂ. ನಗದನ್ನು ಸಂಗ್ರಹಿಸಿದ್ದು, ದೆಹಲಿ ಸ್ಫೋಟದ ಮೊದಲು ಅದನ್ನು ಉಮರ್‌ಗೆ ಹಸ್ತಾಂತರಿಸಲಾಗಿತ್ತು. ನಂತರ ಅವರು ಗುರುಗ್ರಾಮ, ನೂಹ್ ಮತ್ತು ಹತ್ತಿರದ ಪ್ರದೇಶಗಳಿಂದ ಐಇಡಿ ತಯಾರಿಕೆಗಾಗಿ ಉದ್ದೇಶಿಸಲಾದ 3 ಲಕ್ಷ ರೂ. ಮೌಲ್ಯದ 20 ಕ್ವಿಂಟಾಲ್‌ಗೂ ಹೆಚ್ಚು ಎನ್‌ಪಿಕೆ ರಸಗೊಬ್ಬರವನ್ನು ಖರೀದಿಸಿದ್ದರು ಎಂದು ಮೂಲಗಳು ತಿಳಿಸಿವೆ.








