ನಾಸಿಕ್: ದೇಶಾದ್ಯಂತ ಸಂಚಲನ ಮೂಡಿಸಿದ್ದ ನಾಸಿಕ್‌ನ ಟಿಸಿಎಸ್ (TCS) ಕಚೇರಿಯ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅವರನ್ನು ಮಹಾರಾಷ್ಟ್ರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಳೆದ 25 ದಿನಗಳಿಂದ ತಲೆಮರೆಸಿಕೊಂಡಿದ್ದ ಈಕೆಯನ್ನು ಛತ್ರಪತಿ ಸಂಭಾಜಿನಗರದ ಕೈಸರ್ ಕಾಲೋನಿಯ ಫ್ಲಾಟ್‌ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಸಿಕ್ ವಿಶೇಷ ತನಿಖಾ ತಂಡ (SIT) ಮತ್ತು ಛತ್ರಪತಿ ಸಂಭಾಜಿನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿದಾ ಖಾನ್‌ರನ್ನು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಆಕೆ ಇದ್ದ ಫ್ಲಾಟ್ ಮೇಲೆ ನಿಗಾ ಇಟ್ಟಿದ್ದರು.
ಸಹೋದ್ಯೋಗಿ ಮಹಿಳೆಯರಿಗೆ ಇಸ್ಲಾಮಿಕ್ ಸಂಪ್ರದಾಯದಂತೆ ಉಡುಗೆ ತೊಡಲು ಒತ್ತಾಯಿಸುವುದು, ಬುರ್ಖಾ ನೀಡುವುದು, ಮೊಬೈಲ್‌ನಲ್ಲಿ ಧಾರ್ಮಿಕ ಆಪ್‌ಗಳನ್ನು ಹಾಕಿಕೊಡುವುದು ಮತ್ತು ಬಲವಂತದ ಮತಾಂತರಕ್ಕೆ ಪ್ರಚೋದನೆ ನೀಡಿದ ಗಂಭೀರ ಆರೋಪಗಳು ಈಕೆಯ ಮೇಲಿವೆ.
ತಾನು ಎರಡು ತಿಂಗಳ ಗರ್ಭಿಣಿ ಎಂದು ಹೇಳಿ ನಿದಾ ಖಾನ್ ನಿರಾತಂಕ ಜಾಮೀನು ಕೋರಿ ನಾಸಿಕ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಪ್ರಕರಣದ ತೀವ್ರತೆಯನ್ನು ಗಮನಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.








