ಶಿವಮೊಗ್ಗ : ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಶಾಂತಿ ಕದಡುವ, ದ್ವೇಷ ಹರಡುವವರ ಮೇಲೆ ನಿಗಾ ವಹಿಸಿ ಕಾನೂನು ಚೌಕಟ್ಟಿನೊಳಗೆ ಕಠಿಣ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆಯು ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ಅಧಿಕಾರಿ ಮತ್ತು ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡಿ, ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತಂದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಇಲಾಖೆಯ ಮೇಲೆ ಹೆಚ್ಚು ಜವಾಬ್ಧಾರಿ ಇದೆ.ಬಡವರ ಪರ ಸರ್ಕಾರ ನಮ್ಮದು. ಸಮಾಜದಲ್ಲಿ ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸವಾಗಬೇಕು. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಎಂದರು.