ಬೆಂಗಳೂರು : ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕಡೆಗೂ ನೂರಡಿ ದಾಟಿದೆ. ಸಾಮಾನ್ಯವಾಗಿ ಮೇ, ಜೂನ್‌ನಲ್ಲೇ ನೂರು ಅಡಿ ತಲುಪುತ್ತಿದ್ದ ಕನ್ನಂಬಾಡಿ ಕಟ್ಟೆಯ ನೀರಿನ ಮಟ್ಟ ಈ ವರ್ಷ ಜುಲೈ ಮೊದಲ ವಾರದಲ್ಲಿ ಮುಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡುತ್ತಿದ್ದು ಜುಲೈ 8 ರಿಂದ ವಿಸಿ ನಾಲೆಗಳಿಗೆ ನೀರ್ಹರಿಸಲು ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಹೌದು ಜುಲೈ 8 ರಿಂದ ವಿಸಿ ನಾಲೆಗಳಿಗೆ ನೀರು ಹರಿಸಲು ಪ್ಲಾನ್ ಮಾಡಲಾಗಿದ್ದು, ಹಾಗಾಗಿ ಇಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಈ ಒಂದು ಸಭೆಯಲ್ಲಿ ನೀರು ಹರಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಸಿ ನಾಲೆಗಳಿಗೆ ನೀರು ಹರಿಸುವ ಕುರಿತಂತೆ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ಮಾಹಿತಿ ನೀಡಲಿದ್ದಾರೆ. ಕಳೆದ ವರ್ಷ ಬರಗಾಲ ಹಿನ್ನೆಲೆಯಲ್ಲಿ ನೀರು ಹರಿಸಲು ಆಗಿಲ್ಲ ಈಗ ಡ್ಯಾಮ್ ನಲ್ಲಿ ನೀರಿನ ಮಟ್ಟ 100 ಅಡಿಗೆ ತಲುಪಿದೆ ಜುಲೈ 8 ರಿಂದ ನಾಲೆಗಳಿಗೆ ನೀರು ಬಿಡಲು ಸಿದ್ಧತೆಯಾಗುತ್ತಿದೆ ಎಂದು ತಿಳಿದುಬಂದಿದೆ.