ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಜಟಾಪಟಿ ತೀವ್ರವಾಗಿ ನಡೆಯುತ್ತಿದ್ದು, ಇದರ ನಡುವೆ ಕೆಪಿಸಿಸಿ ಪಟ್ಟದ ಅಧ್ಯಕ್ಷ ಸ್ಥಾನಕ್ಕೂ ಅಹಿಂದ ನಾಯಕರ ಪೈಪೋಟಿ ನಡೆಯುತ್ತಿದೆ. ಇದೀಗ ಇಕ್ಬಾಲ್ ಹುಸೇನ್ ಅವರು ಡಿಕೆ ಶಿವಕುಮಾರ್ ಸಿಎಂ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ ಎಂದು ಮತ್ತೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್ ಒಳ್ಳೆಯ ರೀತಿಯಲ್ಲಿ ನಾವು ಜನಗಳಿಗೆ ಕೆಲಸ ಮಾಡಿಕೊಡಬೇಕಾಗುತ್ತದೆ. ಬದಲಾವಣೆ ಬೇಕು ಅಂತ ಜನ ಬಯಸುತ್ತಿದ್ದು ಅದರಲ್ಲಿ ನಾನು ಕೂಡ ಒಬ್ಬ ಹಾಗಾಗಿ ಮೇ ತಿಂಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಸಿಗುತ್ತೆ ಎನ್ನುವ ಭರವಸೆ ಇದೆ ಎಂದು ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದರು.
ಕಾಲ ಬಹಳ ಸನ್ನೀಹಿತವಾಗಿದೆ ಅವರಿಗೆ ಅಧಿಕಾರ ಸಿಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ನಾನು ಮತ್ತು ಎಲ್ಲಾ ಸಾಕಷ್ಟು ಶಾಸಕರು ಕೂಡ ಇದನ್ನೇ ಬಯಸುತ್ತಿದ್ದೇವೆ. ಜನ ಕಾರ್ಯಕರ್ತರು ಮುಖಂಡರು ಕೂಡ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ.
ಸಿಎಂ ಹಾಗು ಡಿಸಿಎಂ ನಡುವೆ ಒಪ್ಪಂದ ವಿಚಾರವಾಗಿ ನಮ್ಮ ನಾಯಕರೇ ಆ ಕುರಿತು ಹೇಳಿಕೆ ನೀಡಿದ್ದಾರಲ್ಲ. ಕೂಲಂಕುಶವಾಗಿ ಎಲ್ಲವನ್ನು ಬಿಡಿಸಿ ಹೇಳಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಯಾರ ಒಪ್ಪಂದಕ್ಕೆ ಕುತ್ಕೊಂಡಿದ್ದರೊ, ಯಾರು ಯಾರ ಜೊತೆಯಲ್ಲಿ ಯಾವ ಒಪ್ಪಂದ ಮಾಡಿಕೊಂಡಿದ್ದಾರೋ ಆ ಬಗ್ಗೆ ನಮ್ಮ ನಾಯಕರು ಎಲ್ಲ ಈಗಾಗಲೇ ಹೇಳಿದ್ದಾರಲ್ಲ. ಈ ಕುರಿತು ಕಾಲ ಕೂಡಿ ಬಂದಿದ್ದು ಕಾಲವೇ ಉತ್ತರ ಕೊಡಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಹೇಳಿದ್ದಾರೆ. ಹಾಗಾಗಿ 15ನೇ ತಾರೀಕಿನ ಒಳಗಾಗಿ ಎಲ್ಲವು ಗೊತ್ತಾಗಲಿದೆ ಎಂದು ತಿಳಿಸಿದರು.








