ಕೊಪ್ಪಳ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳು ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ಬ್ಯಾನರ್ ಹಾಕಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಶಾಸಕ ಬಸವರಾಜ್ ರಾಯರೆಡ್ಡಿ 2028ರವರೆಗೆ ಸಿದ್ದರಾಮಯ್ಯರೆ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ಗೊತ್ತಿರುವ ಮಟ್ಟಿಗೆ ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ. ಇದು ನನ್ನ ನಂಬಿಕೆ. ವರಿಷ್ಠರು ಬದಲಾವಣೆ ಮಾಡಬೇಕು ಅಂದರೆ ಶಾಸಕರ ಸಭೆ ಕರೆಯಬೇಕು. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಆದರೆ ಆ ಪರಿಸ್ಥಿತಿ ಉದ್ಭವಿಸಿಲ್ಲ. ಕೇರಳ ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ರಾಹುಲ್ ಗಾಂಧಿ ಬರಬಹುದು. ಆಗ ರಾಹುಲ್ ಗಾಂಧಿ ಜೊತೆಗೆ ಮುಖ್ಯಮಂತ್ರಿ ಚರ್ಚೆ ಮಾಡಬಹುದು.
ಮೇ 30ರವರೆಗೆ ಸಂಪುಟ ಪುನರಚನೆ ಅಥವಾ ವಿಸ್ತರಣೆ ಮಾಡಬಹುದು ಮೂರು ವರ್ಷ ಆಯ್ತು ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು. ಜನಪರ ಆಡಳಿತ ಕೊಟ್ಟರೆ ಮುಂದೆ ಅಧಿಕಾರಕ್ಕೆ ಬರಲು ಸಹಾಯ ಆಗುತ್ತದೆ. 2028 ರಲ್ಲಿ ಸಿಎಂ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಸಹಾಯವಾಗುತ್ತದೆ. ಸಿದ್ದರಾಮಯ್ಯ ನಾಯಕತ್ವ ಮತ್ತು ಡಿಕೆ ಶಿವಕುಮಾರ್ ಅಧ್ಯಕ್ಷತೆ ಎಂದು ರಾಯರೆಡ್ಡಿ ಹೇಳಿದರು. ನನ್ನ ಪ್ರಕಾರ ಬದಲಾವಣೆ ಆಗಲ್ಲ ಎಂದು ಕೊಪ್ಪಳದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ಹೇಳಿಕೆ ನೀಡಿದರು.








