ಬೆಳಗಾವಿ : ವಕ್ಫ್ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿ ಅವರಿಗೆ 150 ಕೋಟಿ ರೂಪಾಯಿ ಆಮಿಷ ಒಡ್ಡಿರುವ ಆರೋಪ, ಕೋವಿಡ್ ಅಕ್ರಮಗಳ ಕುರಿತ ನ್ಯಾಯಮೂರ್ತಿ ಡಿಕುನ್ಹ ವರದಿ, ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸ್ ಪ್ರಕರಣವನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕಾಂಗ್ರಸ್ ಸಿದ್ಧತೆ ನಡೆಸಿದೆ.
ಇಂದಿನಿಂದ ಎರಡನೇ ವಾರದ ವಿಧಾನ ಮಂಡಲದ ಕಲಾಪ ಆರಂಭವಾಗಲಿದ್ದು, ಕಲಾಪದ ವೇಳೆ ಬಳ್ಳಾರಿ ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಬಾಣಂತಿಯರ ಹಾಗೂ ಶಿಶುಗಳ ಸಾವು, ಅಲ್ಲದೇ ಅಬಕಾರಿ ಸಚಿವರಿಂದ 700 ಕೋಟಿ ರೂ. ವಸೂಲಿ ಆರೋಪದ ವಿಷಯಗಳನ್ನು ಪ್ರಸ್ತಾಪಿಸಲು ಸಿದ್ಧತೆ ನಡೆಸಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ.
ಕಳೆದ ಶುಕ್ರವಾರ ನಡೆದ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಿವೈ ವಿಜಯೇಂದ್ರ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದರು. ವಕ್ಫ್ ಆಸ್ತಿ ಕಬಳಿಕೆಯಲ್ಲಿ ಮೌನವಾಗಿರಲು ಬಿಜೆಪಿಯ ಮುಖಂಡ ಅನ್ವರ್ ಮಣಿಪಾಡಿಗೆ 150 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ ಈ ವಿಚಾರವಾಗಿ ಇಂದು ಕಲಾಪದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ಇದೆ.