ಶಿವಮೊಗ್ಗ : ರಾಜ್ಯಾದ್ಯಂತ ಮಲೆನಾಡು, ಕರಾವಳಿ ಜಿಲ್ಲೆಗಳು ಸೇರಿದಂತೆ ಭಾರಿ ಮಳೆ ಸುರಿಯುತ್ತಿದ್ದು, ಕೆಲವೆಡೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರು ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆ ಕುಸಿತವಾಗಿದೆ.
ಹೌದು ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರವಾದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆ ಕುಸಿತವಾಗಿದೆ. ತರಗತಿ ನಡೆಯುವ ವೇಳೆಯೇ ಶಾಲಾ ಗೋಡೆ ಕುಸಿತವಾಗಿದ್ದು, ಮಕ್ಕಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯಾರ್ಥಿಗಳು ತರಗತಿ ಕೋಣೆಯಲ್ಲಿ ಪಾಠ ಕೇಳುವಾಗಲೇ ವಿದ್ಯಾರ್ಥಿಗಳು ಕುಳಿತುಕೊಂಡಿದ್ದ ಹಿಂಬದಿ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ ಕುಸಿತವಾಗಿದೆ.
ತರಗತಿಯಲ್ಲಿ 31 ವಿದ್ಯಾರ್ಥಿಗಳಿದ್ದರು. ಆದರೆ, ವಿಶ್ರಾಂತಿ ಸಮಯವಾಗಿದ್ದರಿಂದ ಕೆಲವು ವಿದ್ಯಾರ್ಥಿಗಳು ಮಾತ್ರ ತರಗತಿ ಕೋಣೆಯಲ್ಲಿದ್ದು, ಉಳಿದ ವಿದ್ಯಾರ್ಥಿಗಳು ತರಗತಿ ಕೋಣೆಯ ಹೊರಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳ ಹಿಂಬದಿಯ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ನೀಡಿದ ವಿಶ್ರಾಂತಿ ಸಮಯದಲ್ಲಿ ಕೊಠಡಿ ಗೋಡೆ ಕುಸಿತ ಆಗಿದ್ದರಿಂದ ವಿದ್ಯಾರ್ಥಿಗಳಿಗೆ ಅನಾಹುತವಾಗಿಲ್ಲ.
ಇನ್ನು ಈ ಶಾಲೆಯು ಶಿಥಿಲಾವ್ಯಸ್ಥೆಯಲ್ಲಿದ್ದು ದುರಸ್ತಿ ಮಾಡಿಸುವಂತೆ ಅಥವಾ ಶಾಲಾ ಕೊಠಡಿ ತೆರವುಗೊಳಿಸಿ ಹೊಸ ಕೋಣೆ ನಿರ್ಮಿಸಿಕೊಡುವಂತೆ ಶಿಕ್ಷಣ ಇಲಾಖೆಗೂ ಮನವಿ ಮಾಡಲಾಗಿತ್ತು. ಮಳೆಯಿಂದ ಬೀಳುವ ಸ್ಥಿತಿಯಲ್ಲಿದ್ದ ಶಾಲಾ ಕೋಣೆಗಳಲ್ಲಿಯೇ ಮಕ್ಕಳು ಪಾಠ ಕೇಳುವಂತಾಗಿದೆ. ಶಾಲಾ ಕೋಣೆಗಳನ್ನು ದುರಸ್ತಿ ಮಾಡುವಂತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳದೇ ಮಕ್ಕಳ ಜೀವದೊಂದಿದೆ ಆಟವಾಡುತ್ತಿದ್ದಾರೆ.