ಹಾವೇರಿ : ಹಾವೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಇ-ಸ್ವತ್ತು ಉತಾರ ಪೂರೈಸಲು ಲಂಚ ಸ್ವೀಕಾರ ಮಾಡುತ್ತಿದ್ದ ಗ್ರಾಮ ಪಂಚಾಯತ್ ಪಿಡಿಒ ಸಹಿತ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ನ ಮೂವರು ಸದಸ್ಯರನ್ನು ಬಂಧಿಸಿದ್ದಾರೆ.
ನವೀನ್ ಅಂದನೂರು ಲೇಔಟ್ ಮಾಲೀಕನಿಗೆ ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನವೀನ್ ಅವರಿಂದ ಲಂಚ ಪಡೆಯುತ್ತಿದ್ದ ವೇಳೆ ಆರೋಪಿಗಳು ಲೋಕಾಯುಕ್ತ ಬಲೆಗ ಬಿದ್ದಿದ್ದಾರೆ. 60 ಪ್ಲಾಟ್ ಗಳ ಎನ್.ಎ ಇ-ಸ್ವತ್ತು ಉತಾರ ಪೂರೈಸಲು 4 ಲಕ್ಷದ 50 ಸಾವಿರ ರೂಪಾಯಿ ಲಂಚಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್ ಪಿಡಿಒ, ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ನ ಮೂವರು ಸದಸ್ಯರು ಲೋಕಾಯುಕ್ತದಿಂದ ಬಂಧಿತರಾದ ಆರೋಪಿಗಳು ಎಂದು ತಿಳಿದುಬಂದಿದೆ.ಪಿಡಿಒ ಕೆ.ಮಂಜುನಾಥ, ಉಪಾಧ್ಯಕ್ಷ ಮಲ್ಲಪ್ಪ ಬೂದಿಹಾಳ, ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್, ಪ್ರಸನ್ನ ಮತ್ತು ಸೈಯದ್ ರೆಹಮಾನ್ ಬಂಧಿತರು ಎಂದು ತಿಳಿದುಬಂದಿದೆ.