ದಾವಣಗೆರೆ : ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್‌ನ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಪಂಚಮಿ (34), ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25) ಹಾಗೂ ವೆಂಕಟೇಶ್ (30) ಎಂದು ತಿಳಿದುಬಂದಿದೆ.
ಈ ಕಿಲಾಡಿ ಗ್ಯಾಂಗ್ ಮೊದಲು ಶ್ರೀಮಂತ ಹಿನ್ನೆಲೆಯುಳ್ಳ ಯುವಕರನ್ನು ಟಾರ್ಗೆಟ್ ಮಾಡುತ್ತಿತ್ತು. ಗ್ಯಾಂಗ್‌ನ ಸದಸ್ಯೆ ಪಂಚಮಿ (34) ಎಂಬಾಕೆ ಶ್ರೀಮಂತ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿ, ಹರಿಹರ ತಾಲೂಕಿನ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಜಗದೀಶ, ಗಂಗಾ ಮಲ್ಲೇಶ್ ನಾಯ್ಕ, ವೆಂಕಟೇಶ್ ಹಾಗೂ ಮತ್ತೊಬ್ಬ ಆರೋಪಿ ಧಾವಿಸಿ ಬಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್ ಅನ್ನು ಜೈಲಿಗಟ್ಟಿದ್ದಾರೆ. ಈ ತಂಡ ಇನ್ನೂ ಹಲವು ಯುವಕರಿಗೆ ವಂಚಿಸಿರುವ ಶಂಕೆ ಇದ್ದು, ತನಿಖೆ ಚುರುಕುಗೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅತಾವುಲ್ಲಾ (46) ಎಂಬುವವರನ್ನು ತಡರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಡಿಕೆ ಕತ್ತರಿಸುವ ಕತ್ತಿ ಹಾಗೂ ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಳೇ ಕಾರುಗಳ ವ್ಯಾಪಾರ ಮಾಡುತ್ತಿದ್ದ ಅತಾವುಲ್ಲಾ, ಭದ್ರಾವತಿ ತಾಲೂಕಿನ ಕಾಗೆಕೋಡುಮಗ್ಗಿ ಗ್ರಾಮದ ತನ್ನ ಸೋದರತ್ತೆಯ ಮಗಳ ಬಳಿ 2 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.








