ಚೈನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಚುನಾವಣಾ ಅಖಾಡದಲ್ಲಿ ಅಭೂತಪೂರ್ವ ಮುನ್ನಡೆ ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಸದ್ಯದ ಟ್ರೆಂಡ್ ಪ್ರಕಾರ, ಟಿವಿ ಕೆ ಪಕ್ಷವು 112ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ತಮಿಳುನಾಡಿನಲ್ಲಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಸರಳ ಬಹುಮತದ ಹೊಸ್ತಿಲಲ್ಲಿ ಟಿವಿ ಕೆ: ತಮಿಳುನಾಡಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿ ಕೆ ಪಕ್ಷಕ್ಕೆ ಸರಳ ಬಹುಮತಕ್ಕೆ ಕೇವಲ 14 ಸ್ಥಾನಗಳ ಕೊರತೆ ಇದೆ. ಪ್ರಾದೇಶಿಕ ಪಕ್ಷಗಳ ಭದ್ರಕೋಟೆಯನ್ನು ಭೇದಿಸಿರುವ ವಿಜಯ್ ಅವರ ಸಂಘಟನಾ ಶಕ್ತಿ ಈಗ ಮ್ಯಾಜಿಕ್ ನಂಬರ್ ಹತ್ತಿರಕ್ಕೆ ಬಂದು ನಿಂತಿದೆ. ಈ ಫಲಿತಾಂಶವು ರಾಜ್ಯದ ಸಾಂಪ್ರದಾಯಿಕ ದ್ರಾವಿಡ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡಿದೆ.
ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೆಗೆ ಎಸ್.ಎ. ಚಂದ್ರಶೇಖರ್ ಒಲವು: ಫಲಿತಾಂಶದ ಬೆನ್ನಲ್ಲೇ ನಟ ವಿಜಯ್ ಅವರ ತಂದೆ ಹಾಗೂ ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ನಾವು ಕಾಂಗ್ರೆಸ್ ಜೊತೆಗೆ ಅಧಿಕಾರ ಹಂಚಿಕೊಳ್ಳಲು ಸಿದ್ಧರಿದ್ದೇವೆ” ಎಂದು ತಿಳಿಸುವ ಮೂಲಕ ಮೈತ್ರಿ ಸರ್ಕಾರದ ಸುಳಿವು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಕೂಡ ಟಿವಿ ಕೆ ಪಕ್ಷಕ್ಕೆ ಬೆಂಬಲ ನೀಡಲು ಮುಂದೆ ಬಂದಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಮಿತ್ರಪಕ್ಷಗಳ ಬೆಂಬಲದ ಲೆಕ್ಕಾಚಾರ: ಸದ್ಯದ ವರದಿಗಳ ಪ್ರಕಾರ, ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮುಸ್ಲಿಂ ಲೀಗ್ 1 ಹಾಗೂ ಪಿಎಂಕೆ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಇನ್ನುಳಿದಂತೆ ಸಿಪಿಐ 3 ಮತ್ತು ಸಿಪಿಎಂ 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಸಮಾನ ಮನಸ್ಕ ಪಕ್ಷಗಳ ಬೆಂಬಲದೊಂದಿಗೆ ಟಿವಿ ಕೆ ಪಕ್ಷವು ಸುಭದ್ರ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ರಾಜಕೀಯ ಪಂಡಿತರ ಲೆಕ್ಕಾಚಾರದಂತೆ, ಈ ಎಲ್ಲ ಪಕ್ಷಗಳ ಬೆಂಬಲ ಸಿಕ್ಕರೆ ವಿಜಯ್ ಅವರ ಮುಖ್ಯಮಂತ್ರಿ ಪಟ್ಟ ಅಲಂಕರಿಸುವ ಹಾದಿ ಸುಗಮವಾಗಲಿದೆ.








