ಬಾಗಲಕೋಟೆ : ಆರೋಪಿಯೊಬ್ಬನನ್ನು ಪ್ರಕರಣದಿಂದ ಕೈ ಬಿಡಲು ಪಿಎಸ್ಐ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಡೆದಿದೆ.
ಬಂಧಿತರನ್ನು ಕೆರೂರು ಠಾಣೆಯ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೇದೆ ಸಂತೋಷ್ ಬಿರಾದರ್ ಎಂದು ಗುರುತಿಸಲಾಗಿದೆ. ಇಸ್ಪೀಟ್ ಆಡುವಾಗ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಪ್ರಕರಣದಿಂದ ಕೈಬಿಡಲು ಹಾಗೂ ಆತನ ಬೈಕ್ ಬಿಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1.70 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಎಸ್.ಪಿ ಮಹಾಲಿಂಗ್ ನಂದಗಾಂವಿ ಮಾರ್ಗದರ್ಶನದಲ್ಲಿ, ಲೋಕಾ ಡಿವೈಎಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.ಲಂಚದ ಬೇಡಿಕೆ ಬಗ್ಗೆ ಮುತ್ತಪ್ಪ ನಾಯ್ಕರ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಫೋನ್ ಕರೆ ರೆಕಾರ್ಡಿಂಗ್ ಆಧಾರದ ಮೇಲೆ ದಾಳಿ ಮಾಡಿ ಇಬ್ಬರನ್ನು ಲೋಕಾಯುಕ್ತ ಬಂಧಿಸಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.








