ಬೆಂಗಳೂರು : ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಉದ್ದೇಶಿಸಿ ಭರ್ಜರಿ ಭಾಷಣ ಮಾಡಿದರು. ಅದಾದ ಬಳಿಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮೋತ್ಸವ ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮದ 45ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾದರು. ಇವಳೆ ಧ್ಯಾನ ಮಂದಿರ ಉದ್ಘಾಟಿಸಿದರು.
ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಭಾರತವು ಬಲಿಷ್ಠವಾಗಬೇಕಾದರೆ ಅದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ. ನಮಗೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬಲವೂ ಬೇಕು. ಶ್ರೀ ಶ್ರೀ ರವಿಶಂಕರ್ ಗುರೂಜಿಯವರಂತಹ ಮಹನೀಯರು ಈ ಕೆಲಸವನ್ನು ಜಾಗತಿಕ ಮಟ್ಟದಲ್ಲಿ ಮಾಡುತ್ತಿದ್ದಾರೆ. ಅವರ 70ನೇ ಜನ್ಮೋತ್ಸವದ ಸಂದರ್ಭದಲ್ಲಿ ಹೊಸ ಧ್ಯಾನ ಮಂದಿರ ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರ ಎಪ್ಪತ್ತನೇ ಜನ್ಮೋತ್ಸವ ಹಿನ್ನೆಲೆಯಲ್ಲಿ ರವಿಶಂಕರ್ ಗುರೂಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಶುಭ ಕೋರಿದರು. ಈ ವೇಳೆ ನೂರನೇ ವರ್ಷದ ಜನ್ಮೋತ್ಸವವೂ ಆಗಲಿ ನಾನೆ ಬರುತ್ತೇನೆ. ರವಿ ಶಂಕರ್ ಗುರೂಜಿ ನನ್ನನ್ನ ಹೊಗಳುತ್ತಾರೆ ಎಂದು ಭಾವಿಸಿದೆ ಆದರೆ ಅವರು ನನಗೆ ನನ್ನ ಕರ್ತವ್ಯ ಏನು ಅಂತ ಹೇಳಿದರು. ಇಲ್ಲಿಗೆ ಆಗಮಿಸಿರುವುದು ನನಗೆ ವಿಶೇಷ ಅನುಭವ ನೀಡಿದೆ ಎಂದು ಹೇಳಿದರು.








