ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಜಾಗತಿಕ ಪರಿಣಾಮಗಳು ಈಗ ರಾಜ್ಯದ ರೈತರ ಹೊಸ್ತಿಲಿಗೆ ಬಂದು ತಲುಪಿವೆ. ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಕೊರತೆ ಎದುರಾಗಿದ್ದು, ಇದರ ನೇರ ಪರಿಣಾಮವಾಗಿ ದರಗಳು ಗಗನಕ್ಕೇರಿವೆ. ಮುಂಗಾರು ಬಿತ್ತನೆಗೆ ಸನ್ನದ್ಧರಾಗುತ್ತಿರುವ ರೈತ ಸಮುದಾಯಕ್ಕೆ ರಸಗೊಬ್ಬರದ ಅಭಾವ ಮತ್ತು ಈ ದಿಢೀರ್ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.
ವಿಶೇಷವಾಗಿ ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ಬೆಲೆಯು ನಿಯಂತ್ರಣ ತಪ್ಪಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿಯೇ ಎರಡು ಬಾರಿ ದರ ಹೆಚ್ಚಳವಾಗಿದೆ. ಮೇ ತಿಂಗಳ ಆರಂಭದಲ್ಲಿ ಪ್ರತಿ 50 ಕೆ.ಜಿ. ಚೀಲಕ್ಕೆ ₹1,400 ಇದ್ದ ಕಾಂಪ್ಲೆಕ್ಸ್ ಮತ್ತು ಪೋಟ್ಯಾಷ್ ಬೆಲೆ, ಈಗಾಗಲೇ ₹1,700ಕ್ಕೆ ತಲುಪಿದೆ. ಇನ್ನು ಮಾರುಕಟ್ಟೆಗೆ ಬರುತ್ತಿರುವ ಹೊಸ ದಾಸ್ತಾನುಗಳ (ಸ್ಟಾಕ್) ಬೆಲೆ ಬರೋಬ್ಬರಿ ₹2,200ಕ್ಕೆ ಜಿಗಿದಿದೆ. ಮುಂಬರುವ ದಿನಗಳಲ್ಲಿ ಈ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಯೂರಿಯಾ ಮತ್ತು ಡಿಎಪಿ (DAP) ರಸಗೊಬ್ಬರಗಳ ಬೆಲೆಯಲ್ಲಿಯೂ ಜಾಗತಿಕವಾಗಿ ಭಾರಿ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರವು ಇವುಗಳ ಮೇಲೆ ಭಾರಿ ಪ್ರಮಾಣದ ಸಬ್ಸಿಡಿಯನ್ನು ನೀಡುವ ಮೂಲಕ ಸದ್ಯಕ್ಕೆ ಬೆಲೆಯನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ, ಮುಕ್ತ ಮಾರುಕಟ್ಟೆಯ ಏರಿಳಿತಗಳಿಂದಾಗಿ ಸರ್ಕಾರ ಎಷ್ಟು ದಿನಗಳ ಕಾಲ ಈ ಸಬ್ಸಿಡಿ ಹೊರೆಯನ್ನು ಭರಿಸಿ ದರವನ್ನು ಕಾಯ್ದುಕೊಳ್ಳಲು ಸಾಧ್ಯ ಎಂಬ ಪ್ರಶ್ನೆಯೂ ಎದುರಾಗಿದೆ.
ಪೊಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳಿಗೂ ಸರ್ಕಾರ ಸಬ್ಸಿಡಿ ನೀಡುತ್ತದೆಯಾದರೂ, ಅದು ನಿಗದಿತ ಮಿತಿಯಲ್ಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗಲೆಲ್ಲ ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸದೇ ಇರುವುದರಿಂದ, ಇವುಗಳ ಮೇಲಿನ ನಿಯಂತ್ರಣ ಕೈತಪ್ಪಿದೆ. ವಿವಿಧ ರಸಗೊಬ್ಬರ ತಯಾರಿಕಾ ಕಂಪನಿಗಳು ಪರಿಸ್ಥಿತಿಗೆ ತಕ್ಕಂತೆ ತಮಗೆ ಇಷ್ಟಬಂದ ಹಾಗೆ ವಿಭಿನ್ನ ದರಗಳನ್ನು ನಿಗದಿಪಡಿಸುತ್ತಿರುವುದು ರೈತರ ಗೊಂದಲ ಹಾಗೂ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಸ್ತುತ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರಿಗೆ ರಸಗೊಬ್ಬರ ಅತ್ಯಗತ್ಯವಾಗಿದೆ. ಆದರೆ ಕೈಗೆಟುಕದ ದರ ಮತ್ತು ಮಾರುಕಟ್ಟೆಯಲ್ಲಿ ಉಂಟಾಗಿರುವ ಅಭಾವದಿಂದಾಗಿ ರೈತರು ತತ್ತರಿಸಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ಗೊಬ್ಬರಗಳಿಗೂ ಹೆಚ್ಚುವರಿ ಸಬ್ಸಿಡಿ ಪ್ರಕಟಿಸುವ ಮೂಲಕ ಮುಂಗಾರು ಬಿತ್ತನೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂಬ ಆಗ್ರಹ ರೈತ ವಲಯದಿಂದ ಕೇಳಿಬರುತ್ತಿದೆ.
ಎಫ್‌ಐಡಿ ಕಡ್ಡಾಯ: ಯೂರಿಯಾ ಮತ್ತು
ಇತರೆ ರಸಗೊಬ್ಬರ ಕೊಳ್ಳಲು ಈಗ ಎಫ್‌ಐಡಿ (ರೈತರ ಗುರುತಿನ ಸಂಖ್ಯೆ) ಕಡ್ಡಾಯ. ಎಫ್‌ಐಡಿ ಹೊಂದಿದ ರೈತರಿಗೆ, ‘ಕೆ ಕಿಸಾನ್’ ಆ್ಯಪ್ ಮೂಲಕ ನೋಂದಣಿ ಮಾಡಿ, ಎಕರೆಗೆ ಕೇವಲ 1 ಚೀಲ ಮಾತ್ರ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಿಗೆ ಖರೀದಿ ಮಾಡಲು ಸಾಧ್ಯವಿಲ್ಲ. ಎಫ್‌ಐಡಿಯಲ್ಲಿ ನೋಂದಣಿ ಮಾಡಿಯೇ ಕೊಡಬೇಕಾಗಿದ್ದರಿಂದ ಎಲ್ಲಿಯೇ ಖರೀದಿ ಮಾಡಿದರೂ ಅದು ಎಕರೆಗೆ ಒಂದು ಚೀಲ ಖರೀದಿಯಾಗುತ್ತಿದ್ದಂತೆ ಲಾಕ್ ಆಗುತ್ತದೆ. ಇನ್ನು, 20 ಎಕರೆಗಿಂತಲೂ ಹೆಚ್ಚು ಭೂಮಿ ಇದ್ದ ರೈತರು, ಬೆಳೆ ದೃಢೀಕರಣ ಪ್ರಮಾಣ ಪತ್ರ ನೀಡಿ, ಹೆಚ್ಚುವರಿಯಾಗಿ ಯೂರಿಯಾ ರಸಗೊಬ್ಬರ ಪಡೆಯಬಹುದಾಗಿದೆ.








