ಚಾಮರಾಜನಗರ : ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಎರಡೆರಡು ಬಾರಿ ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಭೇಟಿಯಾಗಿ ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚಿಸಿದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಸಿಎಂ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದು ರಾಹುಲ್ ಗಾಂಧಿ ಅವರಿಗೆ ವರದಿ ಸಲ್ಲಿಸೋಣ ಅವರು ಏನು ಹೇಳುತ್ತಾರೋ ಅದೇ ರೀತಿ ನಿರ್ಧರಿಸೋಣ ಅಂತ ತಿಳಿಸಿದರು.
ಇದೀಗ ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಹೈಕಮಾಂಡ್ ಬಳಿ ಈ ಕುರಿತು ಇನ್ನು ಮಾತನಾಡಬೇಕು ಆದರೆ ಸದ್ಯಕ್ಕಂತೂ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇನ್ನು ಅನುದಾನ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಜಿಎಸ್‌ಟಿ ನೀಡುತ್ತೇವೆ. ಅನುದಾನ ಕೊಡುವ ವಿಚಾರದಲ್ಲಿ ಮಾತ್ರ ಸರಿಯಾಗಿ ಕೊಡುತ್ತಿಲ್ಲ ಹೆಚ್ಚಿನ ಅನುದಾನ ಕೊಡಿ ಎಂದು ನಾನು ಕೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜನರ ಆಶೀರ್ವಾದ ಇರುವವರೆಗೂ ನಾನೆ ಸಿಎಂ ಆಗಿರುತ್ತೇನೆ ಎರಡು ವರ್ಷದ ಬಳಿಕ ಸಂಪುಟ ಪುನಾರಚನೆ ಎಂದಿದ್ದೆ ಆ ವಿಚಾರಕ್ಕೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದಕ್ಕೆ ಎಲ್ಲರೂ ಕೂಡ ಕ್ರಾಂತಿ ಅಂತ ತಿಳಿದುಕೊಂಡಿದ್ದರು ಆದರೆ ಯಾವ ಕ್ರಾಂತಿಯು ಇಲ್ಲ ಯಾವ ಬ್ರಾಂತಿಯು ಇಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ನಾನೇ ಸಿಎಂ ಎಂದು ಸ್ಪಷ್ಟಪಡಿಸಿದರು.








